More

  ಮತ್ತೆ ಗೊಂದಲ ಬೇಡ: ಪಿಎಸ್​ಐ ನೇಮಕಕ್ಕೆ ಡಿಸೆಂಬರ್ 23ಕ್ಕೆ ಪರೀಕ್ಷೆ ನಿಗದಿ

  ಪರೀಕ್ಷೆಯಲ್ಲಿ ಅಕ್ರಮದಿಂದಾಗಿ ಕಳೆದೆರಡು ವರ್ಷಗಳಿಂದ ವಿವಾದಗಳ ಗೂಡಾಗಿರುವ 545 ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೊನೆಗೂ ರ್ತಾಕ ಅಂತ್ಯಕ್ಕೆ ಹತ್ತಿರವಾಗಿದೆ. ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮರುಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 23ಕ್ಕೆ ಪರೀಕ್ಷೆ ನಿಗದಿಪಡಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬುಧವಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಸಾವಿರಾರು ಅಭ್ಯರ್ಥಿಗಳು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

  2021ರ ಅಕ್ಟೋಬರ್ 3ರಂದು ನಡೆದಿದ್ದ ಪರೀಕ್ಷೆಯಲ್ಲಿ 54,104 ಅಭ್ಯರ್ಥಿಗಳು ಹಾಜರಾಗಿದ್ದರು. 2022ರ ಜ.19ರಂದು ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿತ್ತು. ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ನೀಡಿದ್ದ ಮಧ್ಯಂತರ ವರದಿ ಆಧರಿಸಿ ಲಿಖಿತ ಪರೀಕ್ಷೆ ಫಲಿತಾಂಶ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆ ನಡೆಸಲು 2022ರ ಏಪ್ರಿಲ್ 29ರಂದು ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿಂದಿನ ಪ್ರಮಾದಗಳಿಂದ ಸಾಕಷ್ಟು ಪಾಠ ಕಲಿಯಬೇಕಿದೆ. ಪಾರದರ್ಶಕವಾಗಿ ನಡೆಯಬೇಕಿದ್ದ ಪರೀಕ್ಷೆ ಅಕ್ರಮಕ್ಕೆ ಕಾರಣವಾಗಿದ್ದು, ಪ್ರಾಮಾಣಿಕ ಅಭ್ಯರ್ಥಿಗಳ ಪಾಲಿಗೆ ಆಘಾತವೇ ಸರಿ. ಪೊಲೀಸ್ ಇಲಾಖೆಯ ನೇಮಕಾತಿ ಪ್ರಕ್ರಿಯೆಯ ಇತಿಹಾಸವನ್ನೊಮ್ಮೆ ಗಮನಿಸಿದರೆ, ಹಿಂದೆ ಕರ್ನಾಟಕ ಈ ವಿಷಯದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿತ್ತು. ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಂದಾಗಿ ಅದು ಸಾಧ್ಯವಾಗಿತ್ತು. ಆದರೆ ಕಳೆದೊಂದು ದಶಕದಿಂದೀಚೆಗೆ ನೇಮಕಾತಿಯಲ್ಲಿ ಅಕ್ರಮ ನುಸುಳಿರುವುದು ವಿಪರ್ಯಾಸ.

  ಈ ಬಾರಿ ಯಾವುದೇ ಅವ್ಯವಹಾರಕ್ಕೆ ಆಸ್ಪದ ಆಗಬಾರದೆಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಮಾತ್ರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಈ ನಿರ್ಧಾರ ಸ್ವಾಗತಾರ್ಹ. ಏಕೆಂದರೆ, ಹಲವು ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವುದರಿಂದ ಮತ್ತೆ ಅಕ್ರಮ ನಡೆಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಬೆಂಗಳೂರಿನಲ್ಲಿ 60 ಸಾವಿರ ಅಭ್ಯರ್ಥಿಗಳಿಗೆ ಒಟ್ಟಿಗೆ ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು ಕೆಇಎ ಹೊಂದಿದ್ದು, ಬಿಗಿಯಾದ ಕ್ರಮಗಳ ಮುಖೇನ ಪರೀಕ್ಷೆ ನಡೆಯಬೇಕಿದೆ. ಅಕ್ರಮಗಳು ಪುನರಾವರ್ತನೆಯಾಗದಂತೆ, ಬ್ಲ್ಯೂಟೂತ್ ಮತ್ತಿತರ ತಾಂತ್ರಿಕ ಪರಿಕರಗಳು ಪರೀಕ್ಷೆಯಲ್ಲಿ ಬಳಕೆಯಾಗದಂತೆ ಬಹುಎಚ್ಚರ ವಹಿಸಬೇಕಿದೆ. ಮುಖ್ಯವಾಗಿ, ಮತ್ತೆ ದಲ್ಲಾಳಿಗಳು ಹುಟ್ಟಿಕೊಳ್ಳದಂತೆ ನಿಗಾ ವಹಿಸಬೇಕಿದೆ. ಗದ್ದಲ, ಗೊಂದಲದಿಂದ ಹೊರತಾದ ಪಾರದರ್ಶಕತೆ, ಸುವ್ಯವಸ್ಥೆಯಿಂದ ಕೂಡಿದ ಪರೀಕ್ಷೆ ನಡೆಯಬೇಕಿದೆ. ಅಲ್ಲದೆ, ಹಿಂದಿನ ಕಹಿ ಅನುಭವದಿಂದ ಪಾಠ ಕಲಿತು ವ್ಯವಸ್ಥೆ ಸುಧಾರಣೆಯ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇರಿಸಬೇಕು. ಪಿಎಸ್​ಐ ಮಾತ್ರವಲ್ಲದೆ, ಸರ್ಕಾರದ ಇತರ ಹುದ್ದೆಗಳಿಗೆ ನಡೆಯುವ ನೇಮಕಾತಿಗಳು ಕೂಡ ಅವ್ಯವಹಾರಗಳಿಗೆ ಆಸ್ಪದ ನೀಡಬಾರದು. ಒಟ್ಟಾರೆ, ಪಿಎಸ್​ಐ ನೇಮಕಾತಿ ಪರೀಕ್ಷೆ ಸುಸೂತ್ರವಾಗಿ ನಡೆಸುವ ಜವಾಬ್ದಾರಿ ಕೆಇಎ ಮೇಲಿದೆ. ಪ್ರಾಮಾಣಿಕ ಅಭ್ಯರ್ಥಿಗಳು ನಿರಾಶರಾಗದೆ, ಆತ್ಮಸ್ಥೈರ್ಯ ಕಳೆದುಕೊಳ್ಳದೆ ಯಶಸ್ವಿಯಾಗಿ ಪರೀಕ್ಷೆಯನ್ನು ಎದುರಿಸಲಿ.

  ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣ; ಲೋಕಾಯುಕ್ತ ಎಂಟ್ರಿ

  ಶಾಲಾ ವಾಹನಗಳಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್ ಪೊಲೀಸ್; 994 ಕೇಸ್ ದಾಖಲು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts