

ಶಿವಮೊಗ್ಗ: ತಾಲೂಕಿನ ಆಲದೇವರ ಹೊಸೂರು ಗ್ರಾಮದ ರೈತ ಹನುಮಂತಪ್ಪ ಆನೆ ದಾಳಿಯಿಂದ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು.
ಈ ಭಾಗದಲ್ಲಿ ಕಳೆದೊಂದು ತಿಂಗಳಿನಿಂದ ಆನೆಗಳ ಹಾವಳಿ ಮಿತಿ ಮೀರಿದೆ. ಅಪಾರ ಪ್ರಮಾಣದ ಅಡಕೆ ತೋಟ, ಭತ್ತದ ಗದ್ದೆಗಳು ಆನೆ ಓಡಾಟದಿಂದ ನೆಲಕಚ್ಚಿವೆ. ಈ ನಡುವೆ ರೈತನೂ ಮೃತಪಟ್ಟಿದ್ದು, ಜನರಲ್ಲಿ ಆನೆಗಳ ಬಗ್ಗೆ ಆತಂಕ ಹೆಚ್ಚಿದೆ. ಇದು ಮಾನವ ಹಾಗೂ ವನ್ಯಜೀವಿ ಘರ್ಷಣೆಗೂ ಕಾರಣವಾಗುತ್ತಿದೆ ಎಂದು ಮನವಿ ಮೂಲಕ ವಿವರಿಸಿದರು. ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡುವುದರ ಜತೆಗೆ ಬೆಳೆ ನಷ್ಟ ಅನುಭವಿಸಿದ ರೈತರಿಗೂ ಸೂಕ್ತ ಪರಿಹಾರ ಒದಗಿಬೇಕೆಂದು ಆಗ್ರಹಿಸಿದರು.
ಹೊಳೆಹೊನ್ನೂರು ಭಾಗದಲ್ಲಿ ಸಾಗುವಳಿ ಚೀಟಿ ಪಡೆದಿರುವ ರೈತರನ್ನು ಒಕ್ಕಲೆಬ್ಬಿರುವ ಪ್ರಯತ್ನ ನಡೆಯುತ್ತಿದೆ. ನೂರಾರು ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ರೈತರನ್ನು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನವಾಗಿದೆ. ಇದರಿಂದ ರೈತರು ಆತಂಕದಲ್ಲಿದ್ದಾರೆ. ಈ ರೈತರಿಗೆ ಸರ್ಕಾರ ಅಭಯ ನೀಡಬೇಕೆಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಎಂ ಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ ಜಗದೀಶ್, ಉಪಾಧ್ಯಕ್ಷ ಎಂ.ಮಹದೇವಪ್ಪ, ಶಿವಮೊಗ್ಗ ತಾಲೂಕು ಅಧ್ಯಕ್ಷ ಸಿ.ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಜ್ಞಾನೇಶ್, ಭದ್ರಾವತಿ ತಾಲೂಕು ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಮುಂತಾದವರು ಈ ಸಂದರ್ಭದಲ್ಲಿದ್ದರು.