'ಡೊನಾಲ್ಡ್ ಟ್ರಂಪ್​ ಒಬ್ಬ ಕ್ರೂರಿ, ಮಹಾನ್​ ಸುಳ್ಳುಗಾರ...'

DonaldTrump - MaryanneTrumpBarry
Published on

ವಾಷಿಂಗ್ಟನ್​(ಯುನೈಟೆಡ್ ಸ್ಟೇಟ್ಸ್): 'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಸುಳ್ಳುಗಾರ, ಕ್ರೂರಿ, ನಂಬಿಕೆಗೆ ಅರ್ಹನಲ್ಲ' ಎಂದು ಸ್ವತಃ ಅವರ ಸಹೋದರಿ ಮರಿಯನ್ನೆ ಟ್ರಂಪ್ ಬ್ಯಾರಿ ಹೇಳಿದ್ದಾರೆ. ಈ ಹೇಳಿಕೆ ಅಮೆರಿಕದಲ್ಲಿ ಭಾರೀ ಕೋಲಾಹಲ ಎಬ್ಬಿಸುವ ಸಾಧ್ಯತೆ ಇದೆ.

ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಗಾದಿಗೇರಲು ಪಣತೊಟ್ಟಿರುವ ಡೊನಾಲ್ಡ್ ಟ್ರಂಪ್, ಇತ್ತ ಭರ್ಜರಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಅತ್ತ ಇವರ ಸಹೋದರಿ, 'ಡೊನಾಲ್ಡ್ ಟ್ರಂಪ್ ಓರ್ವ ಕ್ರೂರಿ ಹಾಗೂ ಮಹಾನ್ ಸುಳ್ಳುಗಾರ' ಎಂದಿರುವ ಹೇಳಿಕೆ ಭಾರೀ ಸಂಚಲನ ಮೂಡಿಸಿದ್ದು, ಡೊನಾಲ್ಡ್​ ಟ್ರಂಪ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬ್ಯಾರಿ ಸಂಭಾಷಣೆಯ ಟೇಪ್ ಅಮೆರಿಕದಲ್ಲಿ ಭಾರೀ ಸುದ್ದಿಯಾಗುತ್ತಿದೆ.

'ಡೊನಾಲ್ಡ್​ ಟ್ರಂಪ್​ರ ವಲಸೆ ನೀತಿ ಕ್ರೂರವಾಗಿದೆ. ಪರಿಣಾಮ ಸಾವಿರಾರು ಜನ ಬೀದಿಪಾಲಾದರು' ಎಂದು ತನ್ನ ಸಹೋದರನನ್ನು ದೂಷಿಸಿರುವ ಮರಿಯನ್ನೆ

ಟ್ರಂಪ್ ಬ್ಯಾರಿ, 'ಗಡಿಯಲ್ಲಿ ತಾಯಿ-ಮಕ್ಕಳನ್ನು ಬೇರ್ಪಡಿಸಿ ಬಂಧನ ಕೇಂದ್ರಗಳಿಗೆ ಕಳುಹಿಸಿದ ಕ್ರೂರತನಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಇದು ಟ್ರಂಪ್​ಗೆ ತಟ್ಟಲಿದೆ' ಎಂದಿದ್ದಾರೆ.

'ತನ್ನ ಆಡಳಿತಾವಧಿಯಲ್ಲಿ ಸುಳ್ಳುಗಳನ್ನೇ ಹೇಳಿಕೊಂಡು ಬಂದಿರುವ ಟ್ರಂಪ್​ಗೆ ಯಾವುದೇ ತತ್ವಗಳಿಲ್ಲ. ಅಮೆರಿಕ ದೇಶದ ಪ್ರಜೆಗಳಿಗೆ ಆತ ಮೋಸ ಮಾಡಿದ್ದಾನೆ. ಉತ್ತಮ ಆಡಳಿತ ಕೊಡಲಿಲ್ಲ' ಎಂದು ಸಹೋದರಿ ಮರಿಯನ್ನೆ ಅಸಮಾಧಾನ ಹೊರಹಾಕಿದ್ದಾರೆ.

ಮರಿಯನ್ನೆ ಟ್ರಂಪ್ ಬ್ಯಾರಿಯ ಸಂಭಾಷಣೆಯ ರಹಸ್ಯ ರೆಕಾರ್ಡಿಂಗ್​ ಟೇಪ್‌ನ್ನು ಅವರ ಸಂಬಂಧಿ ಮೇರಿ ಟ್ರಂಪ್ ಶನಿವಾರ ಬಿಡುಗಡೆ ಮಾಡಿದ್ದು, ಈ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ. ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಡೊನಾಲ್ಡ್ ಟ್ರಂಪ್​ ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕುಟುಂಬದ ಆಪ್ತ ವಲಯದಿಂದಲೇ ವಿರೋಧ ವ್ಯಕ್ತವಾಗುತ್ತಿರುವುದು ಟ್ರಂಪ್​ರ ರಾಜಕೀಯ ಹಾದಿಗೆ ಮುಳುವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net