3ನೇ ಮಹಾಯುದ್ಧ ತಡೆಯುತ್ತೇನೆ! ಪ್ರಮಾಣ ವಚನಕ್ಕೂ ಮುನ್ನ ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ | Donald Trump

Donald Trump
Published on

Donald Trump : ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ 2ನೇ ಬಾರಿಗೆ ಶ್ವೇತಭವನಕ್ಕೆ ಮರಳುತ್ತಿದ್ದಂತೆ ಮೂರನೇ ಮಹಾಯುದ್ಧ ಮತ್ತು ತಮ್ಮ ದೇಶದ ಗಡಿಗಳ ಮೇಲಿನ ಆಕ್ರಮಣವನ್ನು ತಡೆಯುವುದಾಗಿ ಪ್ರತಿಜ್ಞೆ ಮಾಡಿದರು. ಕಳೆದ ವರ್ಷ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಸಂಕೇತವಾಗಿ ಟ್ರಂಪ್​ ಅವರು ಈ ಹೇಳಿಕೆಗಳನ್ನು ನೀಡಿದರು.

ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನಾದಿನ ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್​ ಅರೆನಾದಲ್ಲಿ ನಡೆದ ಮೇಕ್​ ಅಮೆರಿಕ ಗ್ರೇಟ್​ ಎಗೇನ್​ ( MAGA ) ವಿಜಯ ಸಮಾವೇಶವನ್ನು ಉದ್ದೇಶಿಸಿ ಟ್ರಂಪ್​ ಅವರು ಈ ಮಾತುಗಳನ್ನಾಡಿದರು.

ನಾವು ಅವರಿಗೆ ( ದೇಶದ ಜನತೆಯನ್ನು ಉದ್ದೇಶಿಸಿ) ಅಮೆರಿಕದ ಇತಿಹಾಸದಲ್ಲಿ ಯಾವುದೇ ಅಧ್ಯಕ್ಷರು ನೀಡಿರದ ಅತ್ಯುತ್ತಮವಾದ ಮೊದಲ ದಿನ, ಮೊದಲ ವಾರ ಮತ್ತು ಅತ್ಯಂತ ವಿಶೇಷವಾದ ಮೊದಲ 100 ದಿನಗಳನ್ನು ನೀಡಲಿದ್ದೇವೆ ಎಂದು ಟ್ರಂಪ್​ ಹೇಳಿದರು. ಇದರೊಂದಿಗೆ ಓವಲ್ ಕಚೇರಿಗೆ ಹಿಂದಿರುಗಿದ ಕೆಲವೇ ಗಂಟೆಗಳಲ್ಲಿ ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್ ಅವರ ಕಾರ್ಯನಿರ್ವಾಹಕ ಕ್ರಮಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿದರು.

ನಾಳೆ ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ನಮ್ಮ ದೇಶದ ಮೇಲಿನ ಆಕ್ರಮಣವನ್ನು ನಿಲ್ಲಿಸುತ್ತೇನೆ. ಎಲ್ಲ ಅಕ್ರಮ ಗಡಿ ಅತಿಕ್ರಮಣಕಾರರು, ಒಂದಲ್ಲ ಒಂದು ರೂಪದಲ್ಲಿ ತಮ್ಮ ಮನೆಗೆ ಮರಳುತ್ತಾರೆ. ನಾವು ನಮ್ಮ ಸಂಪತ್ತನ್ನು ಮರಳಿ ಪಡೆಯಲಿದ್ದೇವೆ. ನಮ್ಮ ಪಾದಗಳ ಕೆಳಗಿರುವ ದ್ರವ ಚಿನ್ನವನ್ನು ಅನ್​ಲಾಕ್​ ಮಾಡಲಿದ್ದೇವೆ ಎಂದು ಟ್ರಂಪ್ ತಮ್ಮ ಸಾವಿರಾರು ಬೆಂಬಲಿಗರಿಗೆ ಕೂಗಿ ಹೇಳಿದರು.

ನಮ್ಮ ಆಡಳಿತವು ದೇಶದ ಗಡಿಗಳ ಮೇಲಿನ ನಿಯಂತ್ರಣವನ್ನು ಶೀಘ್ರವಾಗಿ ಮರುಸ್ಥಾಪಿಸುತ್ತದೆ. ನಾವು ಅಮೆರಿಕದ ಇತಿಹಾಸದಲ್ಲಿಯೇ ಅತಿದೊಡ್ಡ ಗಡಿಪಾರು ಪ್ರಕ್ರಿಯೆಯನ್ನು ಪ್ರಾರಂಭಿಸಲಿದ್ದೇವೆ ಎಂದು ಟ್ರಂಪ್​ ಅವರು ಒತ್ತಿ ಹೇಳಿದರು. ಆದರೆ, ಟ್ರಂಪ್​ ಮಾತಿನಂತೆ ದೇಶದಲ್ಲಿ ನೆಲೆಸಿರುವ ಸಾವಿರಾರು ಅಕ್ರಮ ವಲಸಿಗರನ್ನು ತೆಗೆದುಹಾಕುವ ಕಾರ್ಯಾಚರಣೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ದುಬಾರಿಯು ಆಗಿರುತ್ತದೆ. ಹೀಗಾಗಿ ವಲಸಿಗರನ್ನು ಹೇಗೆ ಹೊರಹಾಕುತ್ತಾರೆಂಬ ಕುತೂಹಲ ಎಲ್ಲರಲ್ಲೂ ಇದೆ.

ಅಂದಹಾಗೆ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಇಂದು ರಾತ್ರಿ 10.30ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದು, ಪದಗ್ರಹಣದ ಬಳಿಕ ಅವರು ತೆಗೆದುಕೊಳ್ಳಲಿರುವ ನಿರ್ಣಯಗಳ ಮೇಲೆ ಜಗತ್ತಿನ ಕಣ್ಣು ನೆಟ್ಟಿದೆ. ಟ್ರಂಪ್ ನಿರ್ಣಯಗಳು ಹಲವು ದೇಶಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಟ್ರಂಪ್ 2 ನೇ ಬಾರಿಗೆ ಅಧ್ಯಕ್ಷರಾಗುತ್ತಿರುವ ವೇಳೆಯಲ್ಲೇ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳ ಮೇಲೂ ಪ್ರಭಾವ ಉಂಟಾಗಲಿದೆ. ಭಾರತದ ಮುಂದೆ ಅವಕಾಶಗಳು ಮತ್ತು ಸವಾಲುಗಳೂ ಇದ್ದು, ಇದರ ಸಮರ್ಥ ನಿರ್ವಹಣೆಯ ಆಧಾರದಲ್ಲಿ ಭಾರತ ಮತ್ತು ಅಮೆರಿಕ ಬಾಂಧವ್ಯ ವೃದ್ಧಿಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net