Donald Trump : ಮೇಕ್ ಅಮೆರಿಕ ಗ್ರೇಟ್ ಅಗೇನ್ ಎಂಬ ಧೇಯ್ಯ ವಾಕ್ಯದಡಿ ಸಾಕಷ್ಟು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ, ತಮ್ಮ ರಾಷ್ಟ್ರದ ಹಿತದೃಷ್ಟಿಯಿಂದ ಒನ್ ಬಿಗ್ ಬ್ಯೂಟಿಫುಲ್ ಮಸೂದೆಯನ್ನು ಪರಿಚಯಿಸಿದರು. ಇದಕ್ಕೆ ಅಲ್ಲಿನ ಸಂಸತ್ತು ಕೂಡ ಅನುಮೋದನೆ ನೀಡಿದೆ. ಅದರ ಬೆನ್ನಲ್ಲೇ ಟ್ರಂಪ್ ಅವರು ಸಹಿ ಹಾಕಿದ್ದು, ಮಸೂದೆ ಇದೀಗ ಕಾನೂನು ಅಥವಾ ಕಾಯ್ದೆಯಾಗಿ ಜಾರಿಗೆ ಬಂದಿದೆ.
ಜುಲೈ 04, ಅಮೆರಿಕ ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಶ್ವೇತಭವನದಲ್ಲಿ ಅದ್ಧೂರಿ ಸಮಾರಂಭ ನಡೆಯಿತು. ಈ ವೇಳೆ ಒನ್ ಬಿಗ್ ಬ್ಯೂಟಿಫುಲ್ ಮಸೂದೆಗೆ ಟ್ರಂಪ್ ಸಹಿ ಹಾಕಿದರು.
ಸಹಿ ಹಾಕಿದ ಬಳಿಕ ಮಾತನಾಡಿದ ಟ್ರಂಪ್, ನಮ್ಮ ದೇಶದಲ್ಲಿ ಜನರು ಇಷ್ಟೊಂದು ಸಂತೋಷವಾಗಿರುವುದನ್ನು ನಾನು ಎಂದಿಗೂ ನೋಡಿಲ್ಲ, ಏಕೆಂದರೆ ಹಲವಾರು ವಿಭಿನ್ನ ಗುಂಪುಗಳ ಜನರನ್ನು ನೋಡಿಕೊಳ್ಳಲಾಗುತ್ತಿದೆ. ಮಿಲಿಟರಿ, ಎಲ್ಲಾ ರೀತಿಯ ನಾಗರಿಕರು ಹಾಗೂ ಎಲ್ಲಾ ರೀತಿಯ ಉದ್ಯೋಗಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಟ್ರಂಪ್ ಸಹಿ ಸಮಾರಂಭದಲ್ಲಿ ಹೇಳಿದರು.
ಕಾಂಗ್ರೆಸ್ ಮೂಲಕ ಮಸೂದೆಯನ್ನು ಅನುಮೋದನೆ ನೀಡಿದ್ದಕ್ಕಾಗಿ ಹೌಸ್ ಸ್ಪೀಕರ್ ಮೈಕ್ ಜಾನ್ಸನ್ ಮತ್ತು ಸೆನೆಟ್ ಬಹುಮತದ ನಾಯಕ ಜಾನ್ ಥೂನ್ ಅವರಿಗೆ ಇದೇ ಸಂದರ್ಭದಲ್ಲಿ ಟ್ರಂಪ್ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ: ಭಾರತೀಯ ನೇವಿಯಲ್ಲಿ ನಾರಿಶಕ್ತಿ : ಆಸ್ಥಾ ಪೂನಿಯಾ ದೇಶದ ಪ್ರಥಮ ಮಹಿಳಾ ಫೈಟರ್ ಪೈಲಟ್
ನೀವು ಅಮೆರಿಕದ ಇತಿಹಾಸದಲ್ಲಿಯೇ ಅತಿದೊಡ್ಡ ತೆರಿಗೆ ಕಡಿತ, ಅತಿದೊಡ್ಡ ಖರ್ಚು ಕಡಿತ, ಅತಿದೊಡ್ಡ ಗಡಿ ಭದ್ರತಾ ಹೂಡಿಕೆಯನ್ನು ಹೊಂದಿದ್ದೀರಿ ಎಂದು ಟ್ರಂಪ್ ಇದೇ ಸಂದರ್ಭದಲ್ಲಿ ಒನ್ ಬಿಗ್ ಬ್ಯೂಟಿಫುಲ್ ಕಾನೂನು ಉಲ್ಲೇಖಿಸಿ ಹೇಳಿದರು.
ಜುಲೈ 4ರ ಸ್ವಾತಂತ್ರ್ಯ ದಿನಾಚರಣೆಗಾಗಿ ಶ್ವೇತಭವನದ ದಕ್ಷಿಣ ಹುಲ್ಲುಹಾಸಿನಲ್ಲಿ ಸಮಾರಂಭ ನಡೆಯಿತು. ಇರಾನ್‌ನಲ್ಲಿ ಇತ್ತೀಚೆಗೆ ನಡೆದ ಅಮೆರಿಕದ ಪರಮಾಣು ಸೌಲಭ್ಯಗಳ ಮೇಲಿನ ದಾಳಿಯಲ್ಲಿ ಭಾಗವಹಿಸಿದ್ದಂತಹ ಸ್ಟೆಲ್ತ್ ಬಾಂಬರ್‌ಗಳು ಮತ್ತು ಫೈಟರ್ ಜೆಟ್‌ಗಳಿಂದ ತುಂಬಿದ್ದ ಫ್ಲೈಓವರ್‌ಗಳಿಂದ ಸಮಾರಂಭ ತುಂಬಿತ್ತು. ಶ್ವೇತಭವನದ ಸಹಾಯಕರು, ಕಾಂಗ್ರೆಸ್ ಸದಸ್ಯರು ಮತ್ತು ಮಿಲಿಟರಿ ಕುಟುಂಬಗಳು ಸೇರಿದಂತೆ ನೂರಾರು ಟ್ರಂಪ್ ಬೆಂಬಲಿಗರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಒನ್ ಬಿಗ್ ಬ್ಯೂಟಿಫುಲ್ ಕಾನೂನು
ತೆರಿಗೆ ಸುಧಾರಣೆಗಳು, ಗಡಿ ಭದ್ರತೆಯ ಬಲವರ್ಧನೆ, ವಲಸೆ ನೀತಿ ಸುಧಾರಣೆ, ಇಂಧನ ಉತ್ಪಾದನೆಯ ಹೊಸ ಉಪಕ್ರಮಗಳು ಮತ್ತು ನಿಯಂತ್ರಣಗಳನ್ನು ಈ ಸಮಗ್ರ ಕಾನೂನು ಒಳಗೊಂಡಿದೆ. (ಏಜೆನ್ಸೀಸ್)