300ರ ಹೊಸ್ತಿಲಲ್ಲಿ ಶುಭಮಾನ್ ಗಿಲ್​ ಔಟ್... ರಿಷಭ್​ ಪಂತ್​, ಬ್ಯಾಟಿಂಗ್​ ಕೋಚ್​ ಸಂಭ್ರಮಿಸಿದ್ದೇಕೆ​? ವಿಡಿಯೋ ವೈರಲ್​...​ Shubman Gill

Shubman Gill
Published on

Shubman Gill : ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಟೆಸ್ಟ್ ನಾಯಕ ಶುಭಮಾನ್ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ, ದುರಾದೃಷ್ಟವಶಾತ್, ಅವರು ತ್ರಿಶತಕ ಹೊಸ್ತಿಲಲ್ಲಿ ಔಟಾದರು. ಇದೇ ಸಂದರ್ಭದಲ್ಲಿ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಭಾರತ ತಂಡದ ಕೋಚ್ ಸೀತಾಂಶು ಅವರ ಸಂಭ್ರಮಾಚರಣೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಪಂದ್ಯದಲ್ಲಿ ಶುಭಮಾನ್​ ಗಿಲ್ 387 ಎಸೆತಗಳನ್ನು ಎದುರಿಸಿ, 30 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 269 ರನ್ ಗಳಿಸಿದರು. ಇದು ಟೆಸ್ಟ್‌ನಲ್ಲಿ ಅವರ ಮೊದಲ ದ್ವಿಶತಕ ಸಾಧನೆ. ಈ ಮೂಲಕ ಗಿಲ್​ ಹಲವಾರು ದಾಖಲೆಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ಭಾರತೀಯ ಮತ್ತು ಏಷ್ಯನ್​ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಲ್ಲಿಯವರೆಗೆ, ಇಂಗ್ಲೆಂಡ್‌ನಲ್ಲಿ ಏಷ್ಯನ್ ನಾಯಕನೊಬ್ಬ ಗಳಿಸಿದ ಅತ್ಯಧಿಕ ಸ್ಕೋರ್ 2011ರಲ್ಲಿ ಲಾರ್ಡ್ಸ್‌ನಲ್ಲಿ ಶ್ರೀಲಂಕಾದ ಬ್ಯಾಟ್ಸ್‌ಮನ್ ತಿಲಕರತ್ನೆ ದಿಲ್ಶಾನ್ ಗಳಿಸಿದ 193 ರನ್‌ಗಳಾಗಿತ್ತು.

ಮನ್ಸೂರ್​ ಅಲಿ ಖಾನ್​ ಪಟೌಡಿ, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್​, ಮಹೇಂದ್ರ ಸಿಂಗ್​ ಧೋನಿ ಮತ್ತು ವಿರಾಟ್​ ಕೊಹ್ಲಿ ಅವರೊಂದಿಗೆ ದ್ವಿಶತಕ ಗಳಿಸಿದ ಏಕೈಕ ಭಾರತೀಯ ನಾಯಕರಾಗಿ ಶುಭಮಾನ್​ ಗಿಲ್ ಸೇರಿಕೊಂಡರು.

ದೀರ್ಘಕಾಲ ಕ್ರೀಸ್​ನಲ್ಲಿ ನೆಲಕಚ್ಚಿ ನಿಂತು ಅದ್ಭುತವಾಗಿ ಆಡುತ್ತಿದ್ದ ಗಿಲ್, ಜೋಶ್​ ಟಾಂಗ್​ ಎಸೆದ ಶಾರ್ಟ್ ಬಾಲ್ ಅನ್ನು ಪುಲ್ ಶಾಟ್ ಆಗಿ ಪರಿವರ್ತಿಸಲು ಪ್ರಯತ್ನಿಸಿದರು. ಆದರೆ, ಬಾಲ್​ ಸರಿಯಾಗಿ ಕನೆಕ್ಟ್​ ಆಗದೇ ಸ್ಕ್ವೇರ್ ಲೆಗ್‌ನಲ್ಲಿದ್ದ ಓಲಿ ಪೋಪ್ ಕೈಗೆ ಸುಲಭವಾಗಿ ಕ್ಯಾಚ್ ನೀಡಿದರು. ಔಟಾದ ಬಳಿಕ, ಸ್ಟ್ಯಾಂಡ್‌ಗಳಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಪೆವಿಲಿಯನ್​ನತ್ತೆ ತೆರಳುತ್ತಿದ್ದ ಗಿಲ್​ಗೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಆದರೆ, ಟೆಸ್ಟ್ ಉಪನಾಯಕ ರಿಷಭ್ ಪಂತ್ ಮತ್ತು ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಅವರ ಪ್ರತಿಕ್ರಿಯೆ ಕ್ಯಾಮೆರಾ ಕಣ್ಣಲ್ಲಿ ದಾಖಲಾಗಿದೆ. ಗಿಲ್ ಪೆವಿಲಿಯನ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ರಿಷಭ್ ಪಂತ್ ಮತ್ತು ಸೀತಾಂಶು ಕೊಟಕ್ ಬಾಲ್ಕನಿಯಲ್ಲಿ ನಿಂತಿದ್ದರು. ಇಬ್ಬರು ನಗುತ್ತಾ ಪರಸ್ಪರ ಅಪ್ಪಿಕೊಂಡು ಏನೋ ಮಾತನಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಪ್ರಸ್ತುತ ವೈರಲ್ ಆಗುತ್ತಿದೆ. ನೆಟಿಜನ್‌ಗಳು ತಮ್ಮದೇ ಆದ ಶೈಲಿಯಲ್ಲಿ ಇದರ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಗಿಲ್​ ಔಟ್​ ಆದ ಸಂದರ್ಭದಲ್ಲಿ ಈ ರೀತಿ ಸಂಭ್ರಮಿಸಿದ್ದೇಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಔಟ್​ ಆಗುವುದನ್ನೇ ಬಯಸಿದ್ದರಾ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net