ಬರಾಕ್ ಒಬಾಮಾ ಬಂಧನದ ಕೃತಕ ಬುದ್ಧಿಮತ್ತೆ ವಿಡಿಯೋ ಹಂಚಿಕೊಂಡ ಡೊನಾಲ್ಡ್ ಟ್ರಂಪ್| trump

barak obama
Published on

ವಾಷಿಂಗ್ಟನ್‌; ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಎಫ್‌ಬಿಐ ಏಜೆಂಟ್‌ಗಳು ಬಂಧಿಸುತ್ತಿರುವಂತೆ ಕೃತಕ ಬುದ್ಧಿಮತ್ತೆ ಆಧಾರಿತ ವಿಡಿಯೋವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್​ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದ ಈ ಪೋಸ್ಟ್​ನಿಂದ ಟ್ರಂಪ್​ ರಾಜಕೀಯ ಬಿರುಗಾಳಿಯನ್ನು ಹುಟ್ಟುಹಾಕಿದ್ದಾರೆ.

ಟ್ರೂತ್ ಸೋಶಿಯಲ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಿದ ಟ್ರಂಪ್‌, ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದು ಹೇಳಿದ್ದಾರೆ. ನಂತರ ಮಾಜಿ ಅಧ್ಯಕ್ಷ ಜೋ ಬಿಡೆನ್ ಸೇರಿದಂತೆ ಹಲವಾರು ಅಮೇರಿಕನ್ ರಾಜಕಾರಣಿಗಳು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ ಶ್ವೇತಭವನದಲ್ಲಿ ಒಬಾಮಾ ಅವರನ್ನು ಬಂಧಿಸಿಸುವ ವಿಡಿಯೋ ನೋಡಬಹುದು. ಮತ್ತೊಂದೆಡೆ ಒಬಾಮಾ ಅವರು ಕೈದಿಯ ವೇಷದಲ್ಲಿರುವುದನ್ನು ಸಹ ತೋರಿಸಲಾಗಿದೆ.

ಈ ನಕಲಿ ವಿಡಿಯೋದಲ್ಲಿ ಒಬಾಮಾ ಜೈಲಿನೊಳಗೆ ಆರೆಂಜ್​ ಬಣ್ಣದ ಜಂಪ್‌ಸೂಟ್ ಧರಿಸಿ ಕುಳಿತಿರುವ ದೃಶ್ಯವನ್ನು ನೋಡಬಹುದು. ಒಬಮಾ ವಿರುದ್ಧ ಟ್ರಂಪ್‌ ವಾಗ್ದಾಳಿ ನಡೆಸಿದ ನಂತರ ಈ ವೀಡಿಯೋ ಹರಿಬಿಡಲಾಗಿದೆ.

2016 ರ ಅಮೆರಿಕದ ಅಧ್ಯಕ್ಷೀಯ ಗೆಲುವಿನಲ್ಲಿ ರಷ್ಯಾದ ಪ್ರಭಾವವಿದೆ ಎಂಬ ಆರೋಪಗಳ ಮೇಲೆ ಒಬಾಮಾ ಆಡಳಿತವನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಹೇಳಿಕೆ ನೀಡಿದ್ದರು. ಅದಾದ ಕೆಲವು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ರಹಸ್ಯ ದಾಖಲೆಗಳನ್ನು ಉಲ್ಲೇಖಿಸಿ ಗಬ್ಬಾರ್ಡ್, ಒಬಾಮಾ ಆಡಳಿತದ ಹಿರಿಯ ಅಧಿಕಾರಿಗಳು ಟ್ರಂಪ್ ಅವರ ಗೆಲುವು ರಷ್ಯಾದ ಹಸ್ತಕ್ಷೇಪದಿಂದಾಗಿ ಎಂದು ತೋರಿಸಲು ಇಂಟೆಲ್ ಮೌಲ್ಯಮಾಪನಗಳನ್ನು ತಯಾರಿಸಿದ್ದಾರೆ ಮತ್ತು ರಾಜಕೀಯಗೊಳಿಸಿದ್ದಾರೆ ಎಂದು ಹೇಳಿದ್ದರು. ಒಬಾಮಾ ಮತ್ತು ಅಮೆರಿಕದ ಮಾಜಿ ಹಿರಿಯ ರಾಷ್ಟ್ರೀಯ ಭದ್ರತಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಕರೆ ನೀಡಿದರು.

(ಏಜೆನ್ಸೀಸ್)

ಈ ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಟ್ರೂತ್ ಸೋಶಿಯಲ್‌ನಲ್ಲಿ, ಟ್ರಂಪ್ ಅವರ ಅನೇಕ ಬೆಂಬಲಿಗರು ಈ ಪೋಸ್ಟ್​ಅನ್ನು ಹಂಚಿಕೊಂಡಿದ್ದಾರೆ, ಆದರೆ ವಿಮರ್ಶಕರು ಇದು ದಾರಿತಪ್ಪಿಸುವ ಮತ್ತು ಅಪಾಯಕಾರಿ ಸಂದೇಶ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net