ಕರೊನಾ ಭೀತಿಯ ನಡುವೆಯೇ ಬಾಹ್ಯಾಕಾಶ ಸಂಪನ್ಮೂಲ ಖರೀದಿಗೆ ಆದೇಶ ಹೊರಡಿಸಿದವರು ಯಾರು?

Covid 19
Published on

ನ್ಯೂಯಾರ್ಕ್‌: ಇಡೀ ವಿಶ್ವವೇ ಕರೊನಾ ವೈರಸ್‌ ಭೀತಿಯಿಂದ ಅಲುಗಾಡುತ್ತಿದ್ದರೆ, ಲಕ್ಷದ ಗಡಿ ದಾಟಿದ ಕರೊನಾ ಸೋಂಕಿನಿಂದ ಇಡೀ ಅಮೆರಿಕ ನಲುಗುತ್ತಿದ್ದ ಸಮಯದಲ್ಲಿಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಬಾಹ್ಯಾಕಾಶದಿಂದ ಸಂಪನ್ಮೂಲಗಳ ಖರೀದಿಗೆ ಸಂಬಂಧಿಸಿದಂತೆ ಆದೇಶವೊಂದನ್ನು ಪ್ರಕಟಿಸಿದ್ದಾರೆ.

ಇದೇ ಏಪ್ರಿಲ್‌ 6ರಂದು ಈ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಬಿಬಿಸಿ ವರದಿ ಮಾಡಿದೆ. ಬಾಹ್ಯಾಕಾಶದ ಸಂಪನ್ಮೂಲಗಳನ್ನು ಅನ್ವೇಷಿಸಲು ಮತ್ತು ಅವುಗಳನ್ನು ಬಳಸುವ ಹಕ್ಕನ್ನು ತಮ್ಮ ದೇಶ ಹೊಂದಿದೆ ಎಂದು ಸಾರುವ ಆದೇಶವಿದು. ಬಾಹ್ಯಾಕಾಶವು ಸಂಪನ್ಮೂಲ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳವಾಗಿರುವ ಹಿನ್ನೆಲೆಯಲ್ಲಿ, ಇಂಥದ್ದೊಂದು ಒಪ್ಪಂದಕ್ಕೆ ಯಾವುದೇ ರೀತಿಯ ಅಂತಾರಾಷ್ಟ್ರೀಯ ಅನುಮತಿ ಬೇಕಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ!

ದೇಶಕ್ಕೆ ಅಗತ್ಯವಿರುವ ಲೀಥಿಯಂ ಅಥವಾ ಕೋಬಾಲ್ಟ್‌ನಂತಹ ಲೋಹಗಳು ಮುಖ್ಯವಾಗಿ ಚೀನಾ, ರಷ್ಯಾ ಅಥವಾ ಕಾಂಗೋ ಮುಂತಾದ ದೇಶಗಳಿಂದ ಬಹುತೇಕ ದೇಶಗಳು ಆಮದು ಮಾಡಿಕೊಳ್ಳುತ್ತವೆ. ಆದರೆ ಈ ಸಂದರ್ಭದಲ್ಲಿ ಅವುಗಳ ಖರೀದಿ ಕಷ್ಟ. ಇದನ್ನು ಹೊರತುಪಡಿಸಿ ಬೇರೆಡೆಯಿಂದ ತರಿಸಿಕೊಳ್ಳಬೇಕೆಂದರೆ ಅವರ ನೀತಿ-ನಿಯಮ, ಕಟ್ಟುಪಾಡುಗಳನ್ನು ಪಾಲಿಸುವ ಅಗತ್ಯತೆ ಕಂಡುಬರುತ್ತದೆ. ಆದ್ದರಿಂದ ಅಮೆರಿಕದಂಥ ದೇಶಗಳು ಇವುಗಳಿಗಾಗಿ ಚಂದ್ರನತ್ತ ದೃಷ್ಟಿ ಹರಿಸತೊಡಗಿವೆ. ಇದು ಟ್ರಂಪ್‌ ಅವರ ಈ ಆದೇಶದಿಂದ ಕಂಡುಬರುತ್ತಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಒಪ್ಪಂದದ ಮೂಲಕ ಹಲವು ದಶಕಗಳಿಂದ ಬಹು ವಿವಾದಲ್ಲಿದ್ದ 1967ರ ಬಾಹ್ಯಾಕಾಶ ಒಪ್ಪಂದಕ್ಕೆ ತೆರೆ ಬಿದ್ದಂತಾಗಿದೆ. 1967ರ ಹೊರ ಬಾಹ್ಯಾಕಾಶ ಒಪ್ಪಂದದ ಪ್ರಕಾರ, ಭೂಮಿಯ ಯಾವುದೇ ಕಡೆ ಬೀಳುವ ತನ್ನ ಉಪಗ್ರಹಗಳಿಗೆ ಅಮೆರಿಕವೇ ವಾರಸುದಾರ. ಸಂಬಂಧಪಟ್ಟ ದೇಶದಿಂದ ಅವಶೇಷಗಳನ್ನು ಅಮೆರಿಕ ವಾಪಸ್‌ ಪಡೆಯಬಹುದಾಗಿದೆ. ಜತೆಗೆ ಉಪಗ್ರಹದಿಂದ ಯಾವುದೇ ಜೀವ ಅಥವಾ ಆಸ್ತಿ ಪಾಸ್ತಿಗೆ ಹಾನಿಯಾಗಿದ್ದರೆ ಅದಕ್ಕೆ ಅಮೆರಿಕ ಪರಿಹಾರ ನೀಡಬೇಕಾಗುತ್ತದೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net