ಸರಿಯಾಗಿ ಮನೆಗೆಲಸ ಮಾಡಲಿಲ್ಲ ಎಂದು ಸೇವಕಿಗೆ ಚೂರಿಯಿಂದ ಇರಿದಳು

knife attack
Published on

ನವದೆಹಲಿ: ಮನೆಗೆಲಸದಾಕೆ ಅಚ್ಚುಕಟ್ಟಾಗಿ ಮನೆಗೆಲಸ ಮಾಡಲಿಲ್ಲ ಎಂದು ಸಿಟ್ಟಿಗೆದ್ದ ಮನೆಯ ಮಾಲಕಿ ಸೇವಕಿಗೆ ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಾಳೆ.

ಬಿಹಾರ ಮೂಲದ ಪ್ರೀತಿಕುಮಾರಿ ರಾಮ್​ (25) ಹಲ್ಲೆಗೆ ಒಳಗಾದ ಮನೆಕೆಲಸದಾಕೆ. ಅಹಮದಾಬಾದ್​ನ ವಾಸ್ನಾ ಪ್ರದೇಶದ ನಿವಾಸಿ ಕಲ್ಯಾಣಿ ಹಲ್ಲೆ ಮಾಡಿದಾಕೆ. ಪ್ರೀತಿಕುಮಾರಿ ನಾಲ್ಕು ವರ್ಷಗಳಿಂದ ಶಾಂತನು ಸಿಂಗ್​ ಮತ್ತು ಕಲ್ಯಾಣಿ ಅವರ ಮನೆಯಲ್ಲೇ ಇದ್ದು, ಮನೆಗೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಎಂದಿನಂತೆ ಮನೆಗೆಲಸದಲ್ಲಿ ತೊಡಗಿದ್ದೆ. ಅಲ್ಲಿಗೆ ಬಂದ ಕಲ್ಯಾಣಿ ಅವರು, ನೀನು ಸರಿಯಾಗಿ ಮನೆಗೆಲಸ ಮಾಡುತ್ತಿಲ್ಲ ಎಂದು ನಿಂದಿಸಿದರು. ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಹೊಡೆಯಲು ಆರಂಭಿಸಿದರು. ಸಿಟ್ಟಿನ ಭರದಲ್ಲಿ ಕೈಗೆ ಸಿಕ್ಕ ಚೂರಿಯಿಂದ ಹಲ್ಲೆ ಮಾಡಿದ್ದಾಗಿ ಪ್ರೀತಿಕುಮಾರಿ ದೂರಿನಲ್ಲಿ ತಿಳಿಸಿರುವುದಾಗಿ ಹೇಳಿದ್ದಾರೆ.

ಹಲ್ಲೆಯಿಂದ ತಪ್ಪಿಸಿಕೊಳ್ಳಲು ಕೈಯನ್ನು ಅಡ್ಡಹಿಡಿದೆ. ಆದರೆ, ನನ್ನ ಎಡಗೈಗೆ ಗಾಯವಾಯಿತು. ಭಯವಾಗಿ ಮನೆಯಿಂದ ಹೊರಗೋಡಿ ಬಂದೆ. ಆಗ ಅಲ್ಲಿದ್ದವರೊಬ್ಬರು ಆಂಬುಲೆನ್ಸ್​ನಲ್ಲಿ ನನ್ನನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ಇದೀಗ ಶಂತನು ಸಿಂಗ್​ ಮತ್ತು ಕಲ್ಯಾಣಿ ಅವರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net