

ಬೆಂಗಳೂರು: ಎಲ್ಲಿ ಬೇಕೆಂದರಲ್ಲಿ ಕಸ ಎಸೆಯಬಾರದು ಎಂದು ಸಾಕಷ್ಟು ಬಾರಿ ಹೇಳಿದರೂ ನಮ್ಮ ಜನರು ಅದನ್ನು ಪರಿಗಣಿಸುವುದೇ ಇಲ್ಲ. ಕಾರು, ಬಸ್ಸಿನಲ್ಲಿ ಹೋಗುವಾಗಂತೂ ತಿಂದಿದ್ದೆಲ್ಲದರ ಕವರ್ ರಸ್ತೆಯದ್ದೇ ಪಾಲು ಎನ್ನುವಂತೆ ಬಿಸಾಡಿಬಿಡುತ್ತಾರೆ. ಈ ರೀತಿ ಮಾಡುವವರಿಗೆ ಈ ಒಂದು ನಾಯಿ ವಿಶೇಷ ರೀತಿಯಲ್ಲಿ ಬುದ್ಧಿ ಕಲಿಸಿದೆ.
ನಾಯಿಯೊಂದು ಸುಮ್ಮನೆ ನಡೆದುಕೊಂಡು ಬರುತ್ತಿರುತ್ತದೆ. ಅದರ ಮುಂದೆ ನಿಂತಿದ್ದ ಕಾರಿನ ಡ್ರೈವರ್ ಸೀಟಿನಲ್ಲಿದ್ದ ವ್ಯಕ್ತಿ ಒಂದಿಷ್ಟು ಕಸ ತುಂಬಿದ್ದ ಕವರ್ನ್ನು ಕಾರಿನ ಕಿಟಕಿಯಿಂದ ಹೊರಗೆ ಎಸೆಯುತ್ತಾನೆ. ಅಲ್ಲೇ ಬರುತ್ತಿದ್ದ ನಾಯಿ ಆ ಕಸದ ಕವರ್ನ್ನು ಕಂಡೊಡನೆ ಅದನ್ನು ಬಾಯಿಯಲ್ಲಿ ಕಚ್ಚಿಕೊಂಡು ಕಾರಿನ ಕಿಟಕಿಯೊಳಗೆ ವಾಪಾಸು ಹಾಕುತ್ತದೆ. ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎನ್ನುವುದನ್ನು ಕಾರಿನ ಡ್ರೈವರ್ಗೆ ಸೂಕ್ಷ್ಮವಾಗಿ ಅರ್ಥವಾಗುವಂತೆ ಮಾಡುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಮನುಷ್ಯರಿಗಿಲ್ಲದ ಬುದ್ಧಿ ನಾಯಿಗೆ ಇರುವುದನ್ನು ಕಂಡು ನೆಟ್ಟಿಗರು ನಾಯಿಗೆ ಶಬ್ಬಾಸ್ ಹೇಳಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. (ಏಜೆನ್ಸೀಸ್)