

ಬೆಂಗಳೂರು: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಸಂಸ್ಥೆಯಲ್ಲಿ ಉದ್ಯೋಗಿಗಳಿಗೆ ಸಂಬಳ ಕೊಡಲೂ ಹಣವಿಲ್ಲ ಎಂಬುದು ಒಮ್ಮೆ ದೊಡ್ಡ ಸುದ್ದಿಯಾಗಿದ್ದು, ಬಳಿಕ ಕೇಂದ್ರ ಸರ್ಕಾರ ಕೆಲವು ಷರತ್ತುಗಳ ಮೇಲೆ ಕೋಟ್ಯಂತರ ಅನುದಾನ ನೀಡಿ ನೆರವಾಗಿದ್ದೆಲ್ಲ ಈಗ ಹಳೇ ವಿಷಯ. ಈ ಮಧ್ಯೆ ಹಳೇದೊಂದು ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಬಿಎಸ್ಎನ್ಎಲ್ ಅಷ್ಟೊಂದು ಹೀನಾಯ ಸ್ಥಿತಿಯಲ್ಲಿದೆಯೇ ಎಂಬ ಬೇಸರ ಮೂಡಿಸುವಂತೆ ಮಾಡಿದೆ.
ಬಿಎಸ್ಎನ್ಎಲ್ ಬ್ರಾಡ್ಬ್ಯಾಂಡ್ ಗ್ರಾಹಕ ಕಮಲ್ ಶರ್ಮಾ ಎಂಬವರು 2019ರ ಸೆಪ್ಟೆಂಬರ್ನಲ್ಲೇ ತಮ್ಮ ಲ್ಯಾಂಡ್ಲೈನ್ ಸಂಪರ್ಕ ಡಿಸ್ಕನೆಕ್ಟ್ಗೊಳಿಸಲು ಅರ್ಜಿ ಸಲ್ಲಿಸಿ, ಸಂಬಂಧಿತ ಎಲ್ಲವನ್ನೂ ಸಂಸ್ಥೆಗೆ ಒಪ್ಪಿಸಿದ್ದರೂ ಅವರಿಗೆ ಮರಳಿಸಬೇಕಾಗಿರುವ ಠೇವಣಿ ಮೊತ್ತವನ್ನು ಬಿಎಸ್ಎನ್ಎಲ್ ಸಂಸ್ಥೆ ಇನ್ನೂ ಮರಳಿಸಿಲ್ಲ.
ಈ ಬಗ್ಗೆ ಸಂಬಂಧಿತ ಗ್ರಾಹಕರು ನಿರಂತರ ಪ್ರಯತ್ನದಲ್ಲಿದ್ದೂ ಒಂದೂವರೆ ವರ್ಷ ಕಳೆದರೂ ಡೆಪಾಸಿಟ್ ಮೊತ್ತ ಪಡೆಯಲು ಸಾಧ್ಯವಾಗದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೇಳಿಕೊಂಡಿದ್ದಾರೆ. ಈ ಮಧ್ಯೆ ಇದಕ್ಕೆ ಸಂಬಂಧಿಸಿದಂತೆ ಬಿಎಸ್ಎನ್ಎಲ್ ತನ್ನ ಅಧಿಕೃತ ಹ್ಯಾಂಡಲ್ ಮೂಲಕ ನೀಡಿರುವ ಪ್ರತಿಕ್ರಿಯೆ ಬಿಎಸ್ಎನ್ಎಲ್ ದುರ್ಗತಿಗೆ ಕನ್ನಡಿ ಹಿಡಿದಂತಿದೆ. ಬಿಎಸ್ಎನ್ಎಲ್ ಗ್ರಾಹಕರಾಗಿದ್ದ ಶರ್ಮಾಗೆ ಬರೀ 3,161.65 ಪೈಸೆ ಬಿಎಸ್ಎನ್ಎಲ್ನಿಂದ ಮರುಪಾವತಿ ಆಗಬೇಕಿದೆ. ಆದರೆ 2019ರ ಸೆಪ್ಟೆಂಬರ್ನಿಂದ ಈ ಮೊತ್ತವನ್ನು ಕೊಡದೆ ಸತಾಯಿಸುತ್ತಿರುವ ಬಿಎಸ್ಎನ್ಎಲ್, ತಮಗೆ ಫಂಡ್ ಬಂದ ಬಳಿಕ ನೀವು ನಮೂದಿಸಿರುವ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಹೇಳಿದೆ.
ಬಿಎಸ್ಎನ್ಎಲ್ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. 2019ರ ಸೆಪ್ಟೆಂಬರ್ನಿಂದ ಕೇಳಿಕೊಳ್ಳುತ್ತಿದ್ದರೂ ಡೆಪಾಸಿಟ್ ಅಮೌಂಟ್ ಕೊಡುವಷ್ಟು ಫಂಡ್ ಬಿಎಸ್ಎನ್ಎಲ್ನಲ್ಲಿ ಇಲ್ಲವೇ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.