ಆಟೋ ಹತ್ತೋಕೆ "ಮೀಟರ್​' ಇದೆಯಾ?

auto
Published on

ಹರೀಶ್​ ಬೇಲೂರು ಬೆಂಗಳೂರು

ದುಂಡಾವರ್ತನೆ, ಅಸಭ್ಯ ಪದಗಳಿಂದ ನಿಂದನೆ, ನಿಗದಿಗಿಂತ ದುಪ್ಪಟ್ಟು ದರ ವಸೂಲಿ, ಪ್ರಯಾಣಿಕರ ಜತೆ ಅಸಭ್ಯ ವರ್ತನೆ, ಪೀಕ್​ ಅವರ್​ನಲ್ಲಿ ಯದ್ವಾತದ್ವಾ ಸುಲಿಗೆ, ಡಿಜಿಟಲ್​ ಮೀಟರ್​ ಬಳಕೆ ನಿರಾಸಕ್ತಿ..... ಹೀಗೆ ರಾಜಧಾನಿಯಲ್ಲಿ ಪ್ರತಿನಿತ್ಯ ಆಟೋಗಳ ಚಾಲಕರು ಹಾಗೂ ಪ್ರಯಾಣಿಕರ ನಡುವೆ ಒಂದಿಲ್ಲೊಂದು ಕಾರಣಕ್ಕೆ ನಡೆಯುತ್ತಿರುವ ಟನೆಗಳು ಸಾಮಾನ್ಯವಾಗಿದೆ.

ಸಿಲಿಕಾನ್​ ಸಿಟಿಯಲ್ಲಿ ಅಂದಾಜು 2 ಲಕ್ಷಕ್ಕೂ ಅಧಿಕ ಆಟೋಗಳಿವೆ. ಆ್ಯಪ್​ ಆಧಾರಿತ ಸೇವೆ ನೀಡಲು ಸರ್ಕಾರ ಅನುಮತಿ ಕೊಟ್ಟಿದೆ. ಹೀಗಾಗಿ, ಚಾಲಕರು ದುಬಾರಿ ಬೆಲೆ ಕೇಳುವುದು ಮತ್ತು ನಿಗದಿತ ಸ್ಥಳಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ರಾಜಧಾನಿಯ ಬಹುತೇಕ ಜನರು ಆ್ಯಪ್​ನಲ್ಲಿ ಆಟೋರಿಾ ಬುಕಿಂಗ್​ ಮಾಡುತ್ತಾರೆ. ಆದರೆ, ಓಲಾ, ಊಬರ್​,ರ್ಯಾಪಿಡೋ, ಹಾಗೂ "ನಮ್ಮ ಯಾತ್ರಿ' ಸೇರಿ ಇತ್ಯಾದಿ ಅಗ್ರಿಗೇಟರ್​ ಆ್ಯಪ್​ಗಳಿಂದ ಸೇವೆ ನೀಡುತ್ತಿರುವ ಆಟೋಗಳು, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ವಸೂಲಿ ಮಾಡುವ ಮುಖೇನ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿವೆ. ಅಲ್ಲದೆ, ಬರೀ ಬುಕಿಂಗ್​ ಸೇವೆ ಒದಗಿಸುವ ಅಗ್ರಿಗೇಟರ್​ ಕಂಪನಿಗಳು ಕಮಿಷನ್​ ಪಡೆಯುವ ಹಣವನ್ನು ಪ್ರಯಾಣಿಕರ ಮೇಲೆ ವಿಧಿಸಿ ಕೋಟ್ಯಂತರ ರೂ.ಅದಾಯ ಮಾಡಿಕೊಳ್ಳುತ್ತಿವೆ. ಆ್ಯಪ್​ ಮೂಲಕ ಸೇವೆ ನೀಡುವ ಆಟೋಗಳಿಗೆ ಇಂತಿಷ್ಟು ದರ ನಿಗದಿಗೊಳಿಸಿದರೂ ನಿಯಮ ಪಾಲನೆಯಾಗುತ್ತಿಲ್ಲ. ಕೆಲವೊಮ್ಮೆ ಸಾರಿಗೆ ಇಲಾಖೆಯು ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗಿಲ್ಲ.

ಡಿಜಿಟಲ್​ ಮೀಟರ್​ ನಿಯಮಕ್ಕೆ ಬ್ರೇಕ್​: ನಗರದಲ್ಲಿ ಓಡಾಡುವ ಆಟೋಗಳಿಗೆ ಮೀಟರ್​ ಕಡ್ಡಾಯವೆಂದು ಸರ್ಕಾರ ಆದೇಶ ಹೊರಡಿಸಿ ಪ್ರತಿ 2 ಕಿಮೀ.ಗೆ 30 ರೂ.ದರ ನಿಗದಿಪಡಿಸಿದೆ. ಆದರೆ, ನಗರದಲ್ಲಿರುವ ಒಟ್ಟು ಆಟೋಗಳ ಪೈಕಿ ಶೇ.70 ಆಟೋಗಳು ಆ್ಯಪ್​ ಆಧಾರಿತ ಸೇವೆ ನೀಡುತ್ತಿದ್ದು,ಡಿಜಿಟಲ್​ ಮೀಟರ್​ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಿವೆ. ಬಹುತೇಕ ಆಟೋಗಳಿಗೆ ಮೀಟರ್​ ಇದ್ದರೂ ಹಾಕುತ್ತಿಲ್ಲ. ಕೆಲ ಆಟೋ ಚಾಲಕರು ಮಾತ್ರ ಡಿಜಿಟಲ್​ ಮೀಟರ್​ ನಿಯಮ ಪಾಲಿಸುತ್ತಿದ್ದಾರೆ. ಕೆಲ ಸಂದರ್ಭದಲ್ಲಿ ಮೀಟರ್​ ಮೇಲೆ 10 ಅಥವಾ 20 ರೂ. ಕೇಳುವುದು ಸಾಮಾನ್ಯವಾಗಿದೆ. ರಾತ್ರಿ ವೇಳೆ ಹೆಚ್ಚಿನ ಹಣ ಕೊಟ್ಟರೆ ಮಾತ್ರ ಆಟೋ ಸೇವೆ ಜನರಿಗೆ ಲಭಿಸುತ್ತಿದೆ. ಪ್ರಯಾಣಿಕರ ಅನಿವಾರ್ಯತೆಯನ್ನೇ ಚಾಲಕರು ಬಂಡವಾಳ ಮಾಡಿಕೊಂಡಿದ್ದಾರೆ.

ಪ್ರೀಪೇಡ್​ ಆಟೋ ಸೇವೆ ಇಲ್ಲ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಹೊರತುಪಡಿಸಿ ನಗರದ ವಿವಿಧ ಕಡೆಗಳಲ್ಲಿ ಪ್ರೀಪೇಡ್​ ಆಟೋ ಸೇವೆಯೇ ಇಲ್ಲದಂತಾಗಿದೆ. ರೈಲ್ವೆ ನಿಲ್ದಾಣದಲ್ಲಿ ಈ ಸೇವೆ ಇದ್ದರೂ ಪ್ರಯಾಣಿಕರಿಗೆ ಸೂಕ್ತವಾಗಿ ಸದ್ಬಳಕೆಯಾಗುತ್ತಿಲ್ಲ. ಪ್ರೀಪೇಡ್​ ಬೂತ್​ಗಳ ಮುಂಭಾಗ ಬೆರಳಣಿಕಷ್ಟೇ ಆಟೋಗಳು ಇರುತ್ತವೆ. ಉಳಿದ ಆಟೋ ಚಾಲಕರು ಮನಸೋಇಚ್ಛೆ ಹಣ ಕೇಳುತ್ತಾರೆ. ಇಂಥ ಚಾಲಕರ ಸುಲಿಗೆ ಕಡಿವಾಣ ಹಾಕುವುದಾಗಿ ಇಲಾಖೆ ಅಧಿಕಾರಿಗಳು ಪದೇಪದೆ ಹೇಳುತ್ತಿದ್ದರೂ ಭರವಸೆ ಹುಸಿಯಾಗಿದೆ.

ಪ್ರಯಾಣಿಕರ ದೂರು ದುಮ್ಮಾನಗಳು

* ಪಿಕ್​ ಅವರ್​ ಅಥವಾ ಮಳೆ ಬಂದಾಗ ನಿಗದಿಗಿಂತ ಮೂರು ಪಟ್ಟು ಅಧಿಕ ದರ ಬೇಡಿಕೆ

* ಮೀಟರ್​ ಯಾಕೆ ಹಾಕೋದಿಲ್ಲ ಎಂದು ಪ್ರಶ್ನಿಸಿದವರಿಗೆ ನಿಂದನೆ

* ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್​ ರಸ್ತೆ, ಕೃ.ರಾ. ಮಾರುಕಟ್ಟೆ, ಕೆಂಪೇಗೌಡ ಬಸ್​ ನಿಲ್ದಾಣ ಮತ್ತಿತರ ಸ್ಥಳಗಳಲ್ಲಿ ಶೇ. 90 ಆಟೋ ಚಾಲಕರಿಂದ ಮೀಟರ್​ ಹಾಕಲು ನಕಾರ

* ಕೆಲವೊಮ್ಮೆ ಬುಕಿಂಗ್​ ಮಾಡಿದಾಗ 200 ರೂ. ಅಸುಪಾಸಿನಲ್ಲಿ ತೋರಿಸುವ ದರವೂ ಆಟೋ ಇಳಿದಾಗ 230-250 ರೂ.ಗೆ ಏರಿಕೆ

* ಚಾಲಕರು ಹೆಚ್ಚು ಮೊತ್ತದ ಕೇಳಿದ್ದ ಬಗ್ಗೆ ದೂರು ದಾಖಲಿಸಲು ಆ್ಯಪ್​ನಲ್ಲಿ ವ್ಯವಸ್ಥೆ ಇಲ್ಲ

* ಕಮಿಷನ್​ಗಾಗಿ ಸೇವೆ ನೀಡುತ್ತಿರುವ ಅಗ್ರಿಗೇಟರ್​ ಆ್ಯಪ್​ಗಳು

* ಕೆಲ ಆಟೋ ಚಾಲಕರಿಂದ ಮಾತ್ರ ಡಿಜಿಟಲ್​ ಮೀಟರ್​ ನಿಯಮ ಪಾಲನೆ

* ಆ್ಯಪ್​ ಆಧಾರಿತ ಸೇವೆ ಚೆನ್ನಾಗಿದ್ದರೂ ಪರಿಸ್ಥಿತಿ ಲಾಭ ಪಡೆದು ನಿಯಮಬಾಹಿರವಾಗಿ ದರ ವಸೂಲಿ

* ಟ್ರಿಪ್​ ಕ್ಯಾನ್ಸಲ್​ ಮಾಡಿದರೆ ನಿಂದನೆ

ಕೆಎಸ್​ಆರ್​ ರೈಲುನಿಲ್ದಾಣದಿಂದ ಚಾಮರಾಜಪೇಟೆಯ 5ನೇ ಮುಖ್ಯರಸ್ತೆಗೆ 3 ಕಿ.ಮೀ. ಆಗಬಹುದು. ಮೀಟರ್​ ಹಾಕಿಕೊಂಡು ಹೋದರೆ 50 ರೂ. ಒಳಗೆ ಆಗುತ್ತದೆ. ಆದರೆ, ರ್ಯಾಪಿಡೋದಲ್ಲಿ ಬುಕಿಂಗ್​ ಮಾಡಿದಾಗ 87 ರೂ. ತೋರಿಸಿತ್ತು. ಸ್ಥಳಕ್ಕೆ ತಲುಪಿ ಚಾಲಕ ಟ್ರಿಪ್​ ಕೊನೆಗೊಳಿಸಿದಾಗ 102 ರೂ. ಪಾವತಿಸುವಂತೆ ಆ್ಯಪ್​ನಲ್ಲಿ ತೋರಿಸಿತ್ತು. ಬೇರೆ ಕಾರಣವಿಲ್ಲದೆ ಹಣವನ್ನು ಪಾವತಿಸಿದ್ದೆ. ಇಂಥ ಟನೆಗಳು ಸಾಕಷ್ಟು ಬಾರಿ ನಡೆದಿವೆ.

| ಹೆಸರು ಹೇಳಲಿಚ್ಛಿಸದ ಪ್ರಯಾಣಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net