

ವಿಜಯಪುರ: ಹಿಂದುತ್ವದ ವಿರೋಧಿ ನೀತಿಯಿಂದಲೇ ಸಿಎಂಗೆ ಸಂಕಷ್ಟ ಎದುರಾಗಿದೆ. ಇನ್ನಾದರೂ ಹಿಂದುತ್ವದ ರಕ್ಷಣೆಗೆ ನಿಲ್ಲಬೇಕೆಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸಿದ್ದರಾಮಯ್ಯಗೆ ಕಿವಿ ಮಾತು ಹೇಳಿದರು.
ಕಾಂಗ್ರೆಸ್ ಅವಧಿಯಲ್ಲಿ ಹಿಂದುಗಳ ಮೇಲೆ ಹಲ್ಲೆ ಹೆಚ್ಚುತ್ತಿದೆ. ಓಪನ್ ಆಗಿಯೇ ತಲ್ವಾರ್, ಪೆಟ್ರೋಲ್ ಬಾಂಬ್ ತಂದು ಹಿಂದುಗಳ ಅಂಗಡಿ ಮುಂಗಟ್ಟು ಮೇಲೆ ದಾಳಿ ನಡೆಸುತ್ತಿದ್ದಾರೆ. ಗಣಪತಿ ವಿಚಾರದಲ್ಲಿ ಗಲಭೆಯಾದರೆ ಹಿಂದುಗಳ ಮೇಲೆಯೇ ಸರ್ಕಾರ ಪ್ರಕರಣ ದಾಖಲಿಸುತ್ತದೆ. ಹೀಗಾಗಿ ಸಮಸ್ತ ಹಿಂದು ಸಮಾಜದ ರಕ್ಷಣೆ ಸಿದ್ದರಾಮಯ್ಯ ನಿಲ್ಲಬೇಕಲ್ಲದೇ ನಾಟಕೀಯವಾಗಿ ದೇವಸ್ಥಾನಗಳಿಗೆ ಹೋಗುವುದನ್ನು ಬಿಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕುಂಕುಮ- ಕೇಸರಿ ಕಂಡರೆ ಮೈಮೇಲೆ ಭೂತ ಬಂದವರಂತೆ ಆಡುವ ವ್ಯಕ್ತಿ ಹಗರಣ ಮೈಮೇಲೆ ಬರುತ್ತಿದ್ದಂತೆ ಸವದತ್ತಿ ಎಲ್ಲಮ್ಮಗೂ ಹೋಗುತ್ತಾರೆ, ಚಾಮುಂಡಿಗೂ ಹೋಗುತ್ತಾರೆ. ಇಷ್ಟಾದರೂ ಹಿಂದುತ್ವ ಎದೆಯಲ್ಲಿ ಇದೆ ಎಂಬುದಕ್ಕೆ ನಿಮಗೆ ಧನ್ಯವಾದ ಎಂದು ಸಿಎಂ ಸಿದ್ದರಾಮಯ್ಯರನ್ನುದ್ದೇಶಿಸಿ ಹೇಳಿದ ಈಶ್ವರಪ್ಪ, ಹಿಂದುತ್ವ ಉಳಿಸಿದರೆ ಮಾತ್ರ ಚಾಮುಂಡಿ ನಿಮ್ಮನ್ನು ಉಳಿಸುತ್ತಾಳೆ. ಇದು ನಾಟಕೀಯವಾಗಿದ್ದರೆ ಯಲ್ಲಮ್ಮ, ಚಾಮುಂಡಿಯೇ ಮುಡಾ ಪ್ರಕರಣದಲ್ಲಿ ಶಿಕ್ಷೆ ಕೊಡಿಸುತ್ತಾರೆ ಎಂದರು.
ಹಿಂದುಳಿದವರು, ದಲಿತರ ಅಭಿವೃದ್ಧಿ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹಿಂದಿನ ಬಿಜೆಪಿ ಅವಧಿಯಲ್ಲಿದ್ದ 1073 ಯೋಜನೆಗಳನ್ನು ತಡೆ ಹಿಡಿದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವಂತೂ ಜಗಜ್ಜಾಹೀರು. ಜಾಾತಿಗಣತಿ ವರದಿ ಇನ್ನೂ ಮರೀಚಿಕೆಯಾಗಿದೆ. ಒಟ್ಟು 160ಕೋಟಿ ರೂಪಾಯಿ ಖರ್ಚು ಮಾಡಿ ತಯಾರಿಸಿದ ಜಾತಿಗಣತಿ ವರದಿ ಕೂಡಲೇ ಬಿಡುಗಡೆ ಮಾಡಬೇಕೆಂದು ಈಶ್ವರಪ್ಪ ಆಗ್ರಹಿಸಿದರು.
ಹಲವಾರು ಹಗರಣ ಮಾಡಿರುವ ಸಿದ್ದರಾಮಯ್ಯ ಅದಕ್ಕೆ ಪ್ರತಿಯಾಗಿ ವಿರೋಧಿಗಳ ಮೇಲೆ ಕೇಸ್ ಮಾಡುವ ನಿಟ್ಟಿನಲ್ಲಿ ತಲ್ಲೀನರಾಗಿದ್ದಾರೆ. ಅದನ್ನು ಬಿಟ್ಟು ರೈತರು, ಸಾಮಾನ್ಯ ಜನರು, ಹಿಂದುಳಿದ, ದಲಿತರ ಬಗ್ಗೆ ಕಾಳಜಿ ವಹಿಸಿ. ಮಾತೆತ್ತಿದರೆ ನಾನು ದೇವರಾಜು ಅರಸು ಥರ ಅಂಥ ಹೇಳುವವರು ಆ ನಿಟ್ಟಿನಲ್ಲಿ ನಡೆದುಕೊಳ್ಳುವುದು ಬೇಡವೇ? ಎಂದು ಈಶ್ವರಪ್ಪ ಪ್ರಶ್ನಿಸಿದರಲ್ಲದೇ, ರಾಜ್ಯದಲ್ಲಿ ಮಳೆ ಬಂದು ಬೆಳೆ ಹಾಳಾಗಿದೆ. ತಾತ್ಕಾಲಿಕವಾಗಿಯಾದರೂ ರೈತರಿಗೆ ಪರಿಹಾರ ಕೊಡಿ. ರಸ್ತೆ, ಚರಂಡಿ ತ್ವರಿತವಾಗಿ ರಿಪೇರಿಗೊಳಿಸಿ ಎಂದರು.
ಮುಖಂಡ ರಾಜು ಬಿರಾದಾರ ಹಾಗೂ ರಾಹುಲ್ ಔರಂಗಬಾದ್, ಕಾಶಿನಾಥ ಚೆನ್ನವೀರ, ಶಿಲ್ಪಾ ಕುದರಗೊಂಡ ಮತ್ತಿತರರಿದ್ದರು.