

ನವದೆಹಲಿ: ಕೀನ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ದೊಡ್ಡ ಗಣೇಶ್ ಅವರನ್ನು ಕೀನ್ಯಾ ಕ್ರಿಕೆಟ್ ಮಂಡಳಿ ಒಂದೇ ತಿಂಗಳಲ್ಲಿ ವಜಾಗೊಳಿಸಿದೆ.
ದೊಡ್ಡ ಗಣೇಶ್ ನೇಮಕ ಅಸಮರ್ಪಕವಾಗಿದೆ. ಕೆಲವು ಕಾರ್ಯ ವಿಧಾನಗಳನ್ನು ಅನುಸರಿಸಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ಈ ನೇಮಕವನ್ನು ಕೀನ್ಯಾ ಕ್ರಿಕೆಟ್ ಮಂಡಳಿ ಕಾರ್ಯಕಾರಿ ಮಂಡಳಿಯು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಅವರ ನೇಮಕಾತಿಯನ್ನು ಅನುಮೋದಿಸಲು ನಿರಾಕರಿಸಿದೆ ಎಂದು ತಿಳಿದು ಬಂದಿದೆ.
2012-13 ರಲ್ಲಿ ಗೋವಾ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ 51 ವರ್ಷದ ದೊಡ್ಡ ಗಣೇಶ್ ಕಳೆದ ತಿಂಗಳಷ್ಟೇ ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಡಿಸೆಂಬರ್ನಲ್ಲಿ ಅವರು ಜವಾಬ್ದಾರಿ ವಹಿಸಿಕೊಳ್ಳಬೇಕಿತ್ತು.
ಕನ್ನಡಿಗ ದೊಡ್ಡ ಗಣೇಶ್ ವೃತ್ತಿಜೀವನ: 1990-2000 ರಲ್ಲಿ ದೇಶೀಯ ಅಂಗಳದಲ್ಲಿ ಸಂಚಲನ ಸೃಷ್ಟಿಸಿದ್ದ ಗಣೇಶ್ ಟೀಮ್ ಇಂಡಿಯಾ ಪರ ಒಟ್ಟು 5 ಪಂದ್ಯಗಳನ್ನಾಡಿದ್ದಾರೆ. ಭಾರತದ ಪರ 4 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕರ್ನಾಟಕ ವೇಗಿ 5 ವಿಕೆಟ್ ಕಬಳಿಸಿದ್ದರು. ಹಾಗೆಯೇ 1997 ರಲ್ಲಿ ನಡೆದ ಝಿಂಬಾಬ್ವೆ ವಿರುದ್ಧ ಏಕೈಕ ಏಕದಿನ ಪಂದ್ಯವಾಡಿದ್ದ ದೊಡ್ಡ ಗಣೇಶ್ ಅವರು ಒಂದು ವಿಕೆಟ್ ಪಡೆದಿದ್ದರು.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 104 ಪಂದ್ಯಗಳಲ್ಲಿ 20355 ಎಸೆತಗಳನ್ನು ಎಸೆದಿರುವ ದೊಡ್ಡ ಗಣೇಶ್ 10739 ರನ್ಗಳನ್ನು ನೀಡಿ 365 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 89 ಲೀಸ್ಟ್ ಎ ಕ್ರಿಕೆಟ್ನಲ್ಲಿ 4346 ಎಸೆತಗಳ ಮೂಲಕ ಒಟ್ಟು 128 ವಿಕೆಟ್ ಉರುಳಿಸಿದ್ದಾರೆ.