

Doctor Suicide: ವೃತ್ತಿಯಲ್ಲಿ ವೈದ್ಯನಾಗಿದ್ದ ವ್ಯಕ್ತಿ, ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ದುರ್ಘಟನೆ ತಮಿಳುನಾಡಿನ ಚೆನ್ನೈನಲ್ಲಿರುವ ಅಣ್ಣಾ ನಗರದಲ್ಲಿ ವರದಿಯಾಗಿದೆ.
ಪತಿ ಮತ್ತು ಪತ್ನಿ ಇಬ್ಬರು ಉನ್ನತ ಹುದ್ದೆಗಳಲ್ಲಿದ್ದವರೇ ಆದರೂ ಸಾಲದ ಭಾದೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ನಗರ ಪೊಲೀಸರು ಶಂಕಿಸಿದ್ದಾರೆ. ಇಂದು ಬೆಳಗ್ಗೆ ವೈದ್ಯ ಬಾಲಮುರುಗನ್, ಅವರ ಪತ್ನಿ ಮತ್ತು ಇಬ್ಬರು ಪುತ್ರರ ಜತೆ ತಮ್ಮ ಮನೆಯ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೋನಾಲಜಿಸ್ಟ್ ಆಗಿದ್ದ ಬಾಲಮುರುಗನ್, ಪತ್ನಿ ವಕೀಲೆ ಸುಮತಿ ಮತ್ತು ಅವರ ಪುತ್ರರಾದ ಜಸ್ವಂತ್ ಕುಮಾರ್ ಹಾಗೂ ಲಿಂಗೇಶ್ ಕುಮಾರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ದೃಶ್ಯ ನೋಡಿ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ನಗರದಲ್ಲಿ ಹಲವಾರು ಅಲ್ಟ್ರಾಸೌಂಡ್ ಕೇಂದ್ರಗಳನ್ನು ನಡೆಸುತ್ತಿದ್ದ ಡಾ. ಬಾಲಮುರುಗನ್, ದುಬಾರಿ ಮೊತ್ತದ ಸಾಲವನ್ನು ತಮ್ಮ ಮೇಲೆ ಎಳೆದುಕೊಂಡಿದ್ದರು ಎನ್ನಲಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿದ್ದರಿಂದ ಹೊರಬರಲಾಗದೆ ಮನನೊಂದು ಸಾವಿಗೆ ಶರಣಾಗಿರಬಹುದು ಎಂದು ಪೊಲೀಸರು ಆರಂಭಿಕ ಹಂತದ ತನಿಖೆಯಲ್ಲಿ ಹೇಳಿದ್ದಾರೆ. ಇಲ್ಲಿಯವರೆಗೂ ಯಾರಿಂದಲೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಬಾಲಮುರುಗನ್ (52), ಅವರ ಪತ್ನಿ ಸುಮತಿ (47) ಮತ್ತು ಇಬ್ಬರು ಪುತ್ರರು ಎಂದು ಗುರುತಿಸಲಾಗಿದೆ. ಪ್ರಸ್ತುತ ನಗರ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ,(ಏಜೆನ್ಸೀಸ್).