ದೇವರನ್ನೇ ಪರೀಕ್ಷಿಸಿ ಔಷಧ ಕೊಡ್ತಾರೆ ವೈದ್ಯರು...! ಜಗನ್ನಾಥ ಮಂದಿರದಲ್ಲಿದೆ ಇಂಥದ್ದೊಂದು ಪದ್ಧತಿ

lord jagannath
Published on

ಲಖನೌ: ಉತ್ತರ ಭಾರತದಲ್ಲಿ ಆಯಾ ಹವಾಮಾನ ತಕ್ಕಂತೆ ದೇವರಿಗೆ ವಿಶೇಷ ಆರೈಕೆಗಳು ನಡೆಯುತ್ತವೆ. ಬೇಸಿಗೆಯಲ್ಲಿ ಗರ್ಭಗುಡಿಯಲ್ಲಿಯೇ ಎಸಿ ಅಳವಡಿಸುತ್ತಾರೆ. ಚಳಿಗಾಲದಲ್ಲಿ ದೇವರ ವಿಗ್ರಹಕ್ಕೆ ಬೆಚ್ಚನೆಯ ಉಡುಪುಗಳನ್ನು ತೊಡಿಸುವ ಪದ್ಧತಿ ಇಲ್ಲಿದೆ.

ಅಂತೆಯೇ ಉತ್ತರಪ್ರದೇಶದ ಜೌನ್​ಪುರ ಜಿಲ್ಲೆಯಲ್ಲಿರುವ ಜಗನ್ನಾಥ ಮಂದಿರದಲ್ಲಿ ವೈದ್ಯರೇ ದೇವರನ್ನು ಪರೀಕ್ಷಿಸಿ ಔಷಧ ನೀಡುವ ಶಿಫಾರಸು ಮಾಡುತ್ತಾರೆ. ಅಂತೆಯೇ ಔಷಧವನ್ನು ದೇವರಿಗೆ ಸಮರ್ಪಿಸಿ ಬಳಿಕ ಅದನ್ನು ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ.

ಪ್ರತಿವರ್ಷ ಇಂಥದ್ದೊಂದು ಸಂಪ್ರದಾಯ ನಡೆಯುತ್ತದೆ. ದೇವರ ವಿಗ್ರಹಕ್ಕೆ ಸ್ಟಥಾಸ್ಕೋಪ್​ನಿಂದ ಪರೀಕ್ಷಿಸುವ ವೈದ್ಯರು ಬಳಿಕ ಸೋರೆಕಾಯಿಯ ಜ್ಯೂಸ್​ ನೀಡುವಂತೆ ಹೇಳುತ್ತಾರೆ. ಅಂತೆಯೇ ಅದನ್ನು ದೇವರಿಗೆ ನೈವೇದ್ಯ ಮಾಡಿ ಬಳಿಕ ಭಕ್ತರಿಗೆ ಹಂಚಲಾಗುತ್ತದೆ.

ಈ ಪದ್ಧತಿಯ ಹಿಂದೆ ಹಲವು ಐತಿಹ್ಯಗಳಿವೆ. ಆಷಾಢ ಪೂರ್ಣಿಮೆಯಂದು ದೇವರು ಅನಾರೋಗ್ಯಕ್ಕೆ ಗುರಿಯಾಗಿದ್ದರು. ಹೀಗಾಗಿ ಅಂದು ಗರ್ಭಗುಡಿಯನ್ನು ಮುಚ್ಚಲಾಗುತ್ತದೆ. ದೇವರಿಗೆ ಅಜವಾನ್​, ಸೋಂಪು, ಕರಿಮೆಣಸು, ತುಳಸಿ, ಲವಂಗ ಮೊದಲಾದವುಗಳಿಂದ ತಯಾರಿಸಿದ ಕಷಾಯವನ್ನು ನೀಡಲಾಗುತ್ತದೆ.

ಇನ್ನೊಂದು ಐತಿಹ್ಯದ ಪ್ರಕಾರ, ತನ್ನ ಭಕ್ತನಿಗೆ ಬಂದ ಅನಾರೋಗ್ಯವನ್ನು ಸ್ವತ: ದೇವರೇ ಅನುಭವಿಸುತ್ತಾರೆ. ಇನ್ನೊಂದು ನಂಬಿಕೆ ಏನೆಂದರೆ, ಜೂನ್​ ತಿಂಗಳ ಸೆಖೆಯಿಂದ ದೇವರಿಗೆ ಸಂಕಷ್ಟವಾದಾಗ ಭಕ್ತರು 1008 ಬಿಂದಿಗೆಯಿಂದ ಜಲಾಭಿಷೇಕ ನಡೆಸಿದ್ದರು. ಇದರಿಂದ ಜಗನ್ನಾಥನಿಗೆ ಶೀತ ಹಾಗೂ ನೆಗಡಿ ಕಾಣಿಸಿಕೊಂಡಿತಂತೆ...!

ಇಂಥ ಸಂಪ್ರದಾಯಗಳು ದೇವರ ಬಗ್ಗೆ ಜನಪದರಲ್ಲಿರುವ ನಂಬಿಕೆ ಹಾಗೂ ಭಕ್ತಿಗೆ ನಿದರ್ಶನವೇ ಹೊರತು ಬೇರೇನಲ್ಲ ಎನ್ನುವುದು ಪಂಡಿತರ ವ್ಯಾಖ್ಯಾನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net