ರಾತ್ರೋರಾತ್ರಿ ಅರಿಶಿನ ದೋಚಿದ್ದ ಖತರ್ನಾಕ್​ ಕಳ್ಳರಿಗೆ ಆಯ್ತು ತಕ್ಕಶಾಸ್ತಿ!

Turmeric
Published on

ಬೆಳಗಾವಿ: ರಾತೋರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಅಡ್ಡಗಟ್ಟಿ ಚಾಲಕ ಮತ್ತು ಕ್ಲೀನರ್​ಗೆ ಥಳಿಸಿ ಲಾರಿ ಸಮೇತ ಅರಿಶಿನ ದೋಚಿದ್ದ ಖದೀಮರೀಗ ಕಂಬಿ ಎಣಿಸುವಂತಾಗಿದೆ.

ಭರ್ಜರಿ ಕಾರ್ಯಾಚರಣೆ ನಡೆಸಿರುವ ಚಿಕ್ಕೋಡಿ ಪೊಲೀಸರು 7 ದರೋಡೆಕೋರರನ್ನು ಬಂಧಿಸಿದ್ದು, 1.3 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಗಣೇಶ ಕಲ್ಲಪ್ಪ ಕೋಳಿ(34), ದಾದಾಸಾಹೇಬ ಶಂಕರ ಟೋಣ್ಣೆ(34), ಜನಾರ್ದನ ಫೆಂಡ(33), ಗುರುನಾಥ ಹಾಲಳ್ಳಿ(29), ಶಿವಾನಂದ ಪನದಿ(35), ಕಲೀಂ ಮಾಲದಾರ(30) ಮತ್ತು ಪಾಂಡುರಂಗ ಹಳ್ಳೂರ(31) ಬಂಧಿತರು.

ಜೂ.7ರಂದು ತಮಿಳುನಾಡಿನ ಎಂ.ಚಿನ್ನಸ್ವಾಮಿ ಎಂಬುವರು ಲಾರಿಯಲ್ಲಿ ಅರಿಶಿನ ತುಂಬಿಕೊಂಡು ಕಬ್ಬೂರ ಗ್ರಾಮದಿಂದ ಚಿಕ್ಕೋಡಿಗೆ ಬರುತ್ತಿದ್ದರು. ಕಬ್ಬೂರದಿಂದ 2 ಕಿ.ಮೀ. ದೂರದಲ್ಲಿ ಲಾರಿಯನ್ನು ಅಡ್ಡಗಟ್ಟಿದ್ದ ದರೋಡೆಕೋರರು ಚಾಲಕ ಹಾಗೂ ಕ್ಲೀನರ್​ನ ಕೈಕಾಲು ಕಟ್ಟಿ ಅಥಣಿ ತಾಲೂಕಿನ ಹಳ್ಳಿಗೆ ಎಸೆದು, ಲಾರಿ ಸಮೇತ 13 ಲಕ್ಷ ರೂ.‌ ಮೌಲ್ಯದ ಅರಿಶಿನ ದರೋಡೆ ಮಾಡಿದ್ದರು.

ಈ ಕುರಿತು ದೂರು ದಾಖಲಿಸಿಕೊಂಡಿದ್ದ ಚಿಕ್ಕೋಡಿ ಠಾಣೆ ಪೊಲೀಸರು ಖದೀಮರ ಪತ್ತೆಗೆ ಮೂರು ತಂಡ ರಚನೆ ಮಾಡಿದ್ದರು. ಕಾರ್ಯಾಚರಣೆಯಲ್ಲಿ ದರೋಡೆಕೋರರು ಸಿಕ್ಕಿಬಿದ್ದಿದ್ದು, ಆರೋಪಿಗಳಿಂದ 2 ಲಾರಿ, ಟ್ರ್ಯಾಕ್ಟರ್, 2 ಕಾರು, ದ್ವಿಚಕ್ರ ವಾಹನ ಸೇರಿ ಒಟ್ಟು 1.3 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್​ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net