

ಆಗ್ರಾ: ಆ 12 ವರ್ಷದ ಬಾಲಕ ಆರ್ಒ ನೀರಿನ ಘಟಕದಲ್ಲಿ ಕೆಲಸ ಮಾಡಿ, ತನ್ನ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುತ್ತಿದ್ದ. ಅದೊಂದು ದಿನ ಆ ಘಟಕದ ಮಾಲೀಕನ ಚಿನ್ನಾಭರಣ ಕಳೆದುಹೋಯಿತು. ಅದನ್ನು ಈ ಬಾಲಕನೇ ಕದ್ದಿದ್ದಾನೆ ಎಂದು ಶಂಕಿಸಿದ ಮಾಲೀಕ ತನ್ನ ಮನೆಯ ಮೂರನೇ ಮಹಡಿಯಲ್ಲಿರುವ ಕೋಣೆಗೆ ಆ ಬಾಲಕನನ್ನು ಕರೆದೊಯ್ದು, ಕೂಡಿ ಹಾಕಿದ್ದಲ್ಲದೆ, ಚೆನ್ನಾಗಿ ಥಳಿಸಿದ. ವಿದ್ಯುತ್ ಶಾಕ್ ಕೊಟ್ಟ. ಸಿಗರೆಟ್ನಿಂದ ಸುಟ್ಟ.
ಕೊನೆಗೆ ಬಾಲಕನ ಮನೆಗೆ ಹೋಗಿ, ಮನೆಯನ್ನು ಶೋಧಿಸುವ ನೆಪದಲ್ಲಿ ಎಲ್ಲವನ್ನೂ ಚಿಲ್ಲಾಪಿಲ್ಲಿ ಮಾಡಿದ ಆತ, ಬಾಲಕನ ಪಾಲಕರನ್ನು ತನ್ನ ಮನೆಗೆ ಕರೆತಂದು ಬಾಲಕನೊಂದಿಗೆ ಕೂಡಿ ಹಾಕಿದ. ಅಲ್ಲದೆ, ಅವರ ಮೇಲೂ ಮನಬಂದಂತೆ ಹಲ್ಲೆ ಮಾಡಿದ. ಪಾಲಕರನ್ನು ಹುಡುಕಿಕೊಂಡ ದಂಪತಿಯ ಹಿರಿಯ ಮಗ ಬಂದಾಗ ಆತನನ್ನೂ ಕೂಡಿದ ಹಾಕಿದ ಮಾಲೀಕರ ಆತನ ಮೇಲೂ ಹಲ್ಲೆ ಮಾಡಿದ. ಕೊನೆಗೆ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ದಂಪತಿಯ ಸೊಸೆಯನ್ನು ಕರೆಯಿಸಿಕೊಂಡು ಆಕೆಯನ್ನೂ ಕೂಡಿ ಹಾಕಿಕೊಂಡು ಹೊಡೆದ. ತನ್ನ ಮನೆಯ ಹೆಣ್ಣುಮಕ್ಕಳನ್ನು ಕರೆಯಿಸಿಕೊಂಡು, ಆಕೆಯನ್ನು ಬೆತ್ತಲೆ ಮಾಡಿಸಿ ಹೊಡೆಸಿದ...
ಇದು ಆಗ್ರಾದ ಸರಾಯ್ ಖ್ವಾಜಾದಲ್ಲಿರುವ ಆರ್ಒ ನೀರಿನ ಘಟಕದ ಮಾಲೀಕ ಅಬ್ರಾರ್ ಎಸಗಿರುವ ಕೃತ್ಯ. ಇದೀಗ ಈತನೂ ಸೇರಿ ಈ ಕೃತ್ಯಕ್ಕೆ ಸಹಕರಿಸಿದ್ದಕ್ಕಾಗಿ ಮೋಹ್ಸಿನ್, ಜುಬೇರ್, ನದೀಂ ಮತ್ತು ಶ್ಯಾಮಾ ಎಂಬವರನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇವರ ಅಕ್ರಮ ಬಂಧನದಲ್ಲಿದ್ದ ಬಾಲಕನ ಅಣ್ಣ ಹೇಗೋ ತಪ್ಪಿಸಿಕೊಂಡು ಹೋಗಿ ಸಂಬಂಧಿಕರಿಗೆ ಮಾಹಿತಿ ನೀಡಿದ ಬಳಿಕ ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ಪೊಲೀಸರು 36 ಗಂಟೆಗಳಿಂದ ಅಕ್ರಮ ಬಂಧನದಲ್ಲಿದ್ದ ಇವರೆಲ್ಲರನ್ನೂ ಬಿಡುಗಡೆ ಮಾಡಿಸಿ ಠಾಣೆಗೆ ಕರೆದೊಯ್ದುರು. ಬಳಿಕ ವೈದ್ಯಕೀಯ ಪರೀಕ್ಷೆ ಮಾಡಿಸಿ, ಕಳುಹಿಸಿದರು ಎನ್ನಲಾಗಿದೆ.