ಅಶೋಕ್​ ಅವರನ್ನು ಬಿಜೆಪಿ ಕಚೇರಿ ಲೆಕ್ಕಕ್ಕೇ ಇಟ್ಟುಕೊಂಡಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್​ ಟಾಂಗ್​

R Ashok DK Shivakumar
Published on

ಬೆಂಗಳೂರು: ನಮಗೆ ರಾಜಕೀಯ ಪ್ರಜ್ಞೆ, ಶಿಷ್ಟಾಚಾರ ಪಾಲನೆ, ಯಾರಿಗೆ ಗೌರವ ನೀಡಬೇಕು ಎಂಬ ವಿಚಾರದಲ್ಲಿ ಬಿಜೆಪಿಯವರಿಗಿಂತಲೂ ಹೆಚ್ಚಿನ ಪರಿಜ್ಞಾನ ಇದೇ. ಬೇರೆ ರಾಜ್ಯಗಳ ತರಹ ನಾವು ಮಾಡುವುದಿಲ್ಲ. ರಾಜಕೀಯ ಭಿನ್ನಾಭಿಪ್ರಾಯವಿದ್ದರು ನಾವು ಪ್ರಧಾನಿಗೆ ಗೌರವ ಕೊಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಸರ್ಕಾರದ ಪ್ರತಿನಿಧಿಗಳು ತೆರಳಿಲ್ಲ ಎಂಬ ಬಿಜೆಪಿ ಶಾಸಕ ಆರ್​. ಅಶೋಕ್​ ಆರೋಪಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ತಿರುಗೇಟು ನೀಡಿದ್ಧಾರೆ.

ಲೆಕ್ಕಕ್ಕೇ ಇಟ್ಟುಕೊಂಡಿಲ್ಲ

ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಕಚೇರಿ ಆರ್​.ಅಶೋಕ್​ ಅವರನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ ಎಂಬುದಕ್ಕೆ ಅವರು ಆಡಿರುವ ಮಾತುಗಳೇ ಸಾಕ್ಷಿ. ನಾವು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಸಿದ್ದರಿದ್ದೆವು. ಆದರೆ, ಪ್ರಧಾನಿ ಕಚೇರಿಯಿಂದ ಬಂದ ಸಂದೇಶವನ್ನು ಗೌರವಿಸಿ ಅವರ ಸ್ವಾಗತಕ್ಕೆ ತೆರಳಿಲ್ಲ. ಈ ಕುರಿತಂತೆ ಆರ್​.ಅಶೋಕ್​ ಅವರು ಪ್ರಧಾನಿ ಕಚೇರಿಯಿಂದ ಮಾಹಿತಿ ಪಡೆದುಕೊಂಡು ಆ ನಂತರ ಮಾತನಾಡಲಿ ಎಂದಿದ್ದಾರೆ.

ಶಿಷ್ಟಾಚಾರದ ಪ್ರಕಾರ ಪ್ರಧಾನಿ ಅವರನ್ನು ಸ್ವಾಗತಿಸಲು ಸರ್ಕಾರ ಸಿದ್ದವಿತ್ತು. ಆದರೆ, ಪ್ರಧಾನಿ ಕಚೇರಿಯಿಂದ ನಮಗೆ ಬರಬಾರದೆಂದು ಅನಧಿಕೃತವಾಗಿ ಸಂದೇಶ ಬಂದಿತ್ತು. ನಾವು ಈ ಕುರಿತಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ನೀಡುವಂತೆ ಹೇಳಿದ್ದೆವು. ನಂತರ ಪ್ರಧಾನಿ ಕಚೇರಿಯಿಂದ ಮುಖ್ಯಮಂತ್ರಿ, ರಾಜ್ಯಪಾಲರು ಸೇರಿದಂತೆ ಯಾರು ಸ್ವಾಗತ ಮಾಡಲು ಬರುವುದು ಬೇಡ ಎಂದು ಪತ್ರ ಕಳುಹಿಸಿದ್ದಾರೆ. ಈ ಹಿನ್ನಲೆಯಲ್ಲಿ ನಾವು ಯಾರು ತೆರಳಲಿಲ್ಲ. ಅಶೋಕ್​ ಅವರು ಮಾತನಾಡುವ ಮುನ್ನ ಈ ಬಗ್ಗ ಚೆನ್ನಾಗಿ ತಿಳಿದುಕೊಳ್ಳಬೇಕಿತ್ತು ಎಂದು ಟಾಂಗ್​ ಕೊಟ್ಟಿದ್ದಾರೆ.

ಏನಾದರು ಸಮಸ್ಯೆ ಇರಬಹುದು

ನಾವು ಪ್ರಧಾನಮಂತ್ರಿ ಸ್ಥಾನಕ್ಕೆ ಗೌರವ ನೀಡುತ್ತೇವೆ. ಅವರು ನಮ್ಮ ವಿಜ್ಞಾನಿಗಳನ್ನು ಸನ್ಮಾನಿಸಲು ಬಂದಿದ್ದಾರೆ. ಅವರಿಗೆ ನಾವು ಸ್ವಾಗತ ಬಯಸುತ್ತೇವೆ. ನಮಗೆ ಈ ವಿಚಾರದಲ್ಲಿ ರಾಜಕೀಯ ಮಾಡುವ ಉದ್ಧೇಶವಿಲ್ಲ. ರಾಜಕೀಯದ ಆಟ ಮುಗಿದಿದ್ದು, ಈಗ ಏನಿದ್ದರು ಅಭಿವೃದ್ದಿಯತ್ತ ಗಮನಹರಿಸಬೇಕಿದೆ. ರಾಜ್ಯದ ಘನತೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ.

ಆರ್​.ಅಶೋಕ್​ ಅವರಿಗೆ ಈ ವಿಚಾರವಾಗಿ ಮಾಹಿತಿ ಇಲ್ಲ ಎಂದು ಕಾಣುತ್ತಿದೆ. ಪ್ರಧಾನಿ ಮಂತ್ರಿಗಳ ಕಚೇರಿ ಅವರನ್ನು ರಾಜಕೀಯ ಚಿತ್ರಣದಿಂದ ದೂರವಿಟ್ಟಿದೆ. ಹೀಗಾಗಿ ಅವರು ಮಾಹಿತಿ ಇಲ್ಲದೆ ಮಾತನಾಡಿದ್ದಾರೆ. ಅದಕ್ಕೆ ನಾವೇನು ಮಾಡಲು ಸಾಧ್ಯವಿಲ್ಲ. ಅವರಲ್ಲಿ ಏನಾದರು ಸಮಸ್ಯೆ ಇರಬಹುದು ಎಂದು ಆರ್.ಅಶೋಕ್​ ಆರೋಪಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net