ಪಂಜಾಬ್​ನಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೇ; ಸಿಎಂ ಭಗವಂತ್​ ಮಾನ್​ಗೆ ರಾಜ್ಯಪಾಲರ ಬಹಿರಂಗ ಎಚ್ಚರಿಕೆ

Punjab CM Governor
Published on

ಅಮೃತಸರ: ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಸಂವಹನಕ್ಕೆ ಹಾಗೂ ತಮ್ಮ ಪತ್ರಗಳಿಗೆ ಉತ್ತರಿಸದ ಕಾರಣ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ರಾಜ್ಯಪಾಲರಾದ ಬನ್ವಾರಿಲಾಲ್​ ಪುರೋಹಿತ್​ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಜಟಾಪಟಿ ನಡೆಯುತ್ತಿದ್ದು, ಇದೀಗ ತಾರಕಕ್ಕೇರಿದೆ. ಸಂವಿಧಾನದ 356ನೇ ವಿಧಿ ಅಡಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡುವುದಾಗಿ ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ ಕೆಲ ತಿಂಗಳುಗಳಿಂದ ಮಾದಕವಸ್ತು ಕಳ್ಳಸಾಗಾಣೆ ಮತ್ತು ಸರ್ಕಾರ ಅದರ ವಿರುದ್ಧ ಜರುಗಿಸಿರುವ ಕ್ರಮಗಳ ಕುರಿತು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಆದರೆ, ಅವರ ಪತ್ರಗಳಿಗೆ ಮುಖ್ಯಮಂತ್ರಿ ಭಗವಂತ್​ ಮಾನ್​ ಸೇರಿದಂತೆ ಅವರ ಸಚಿವ ಸಂಪುಟದ ಸದಸ್ಯರು ಇದುವರೆಗೂ ಯಾರು ಉತ್ತರವನ್ನು ನೀಡದಿರುವುದು ಅವರ ಕಣ್ಣು ಕೆಂಪಾಗಿಸಿದೆ.

ಪತ್ರದಲ್ಲೇನಿದೆ?

ರಾಜ್ಯದಲ್ಲಿ ಮಾದಕ ವಸ್ತುಗಳ ಕಳ್ಳಸಾಗಾಣೆ ಹಾಗೂ ಲಭ್ಯತೆ ಬಗ್ಗೆ ವಿವಿಧ ಏಜೆನ್ಸಿಗಳಿಂದ ವರದಿಯನ್ನು ಪಡೆದಿದ್ದೇನೆ. ಮೆಡಿಕಲ್​ ಸ್ಟೋರ್​ ಮತ್ತು ಸರ್ಕಾರಿ ನಿಯಂತ್ರಿತ ಮದ್ಯದಂಗಡಿಯಲ್ಲಿ ಡ್ರಗ್ಸ್​ ಲಭ್ಯವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಪ್ರತಿ ಐವರಲ್ಲಿ ಒಬ್ಬರು ಡ್ರಗ್ಸ್​ಗೆ ಅಡಿಕ್ಟ್​ ಆಗಿದ್ದಾರೆ ಎಂದು ಸಂಸದೀಯ ಸ್ಥಾಯಿ ಸಮಿತಿ ವರದಿಯನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಾನು ಹಲವು ಬಾರಿ ಈ ವಿಚಾರವಾಗಿ ಪತ್ರ ಬರೆದಿದ್ದೇನೆ. ಸಂವಹನ ನಡೆಸುವುದಕ್ಕೂ ಪ್ರಯತ್ನಿಸಿದ್ದೇನೆ. ಆದರೆ, ಮುಖ್ಯಮಂತ್ರಿಗಳು ಯಾವ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈಗೆ ಆದಲ್ಲಿ 356ನೇ ವಿಧಿ ಹಾಗೂ ಐಪಿಸಿ ಸೆಕ್ಷನ್​ 124ರ ಅಡಿಯಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಬೇಕಾಗುತ್ತದೆ. ಇದಕ್ಕೂ ಮುನ್ನ ಏನಾದರೂ ಕ್ರಮ ಜರುಗಿಸಿ ಇಲ್ಲವಾದಲ್ಲಿ ಪರಿಣಾಮ ಎದುರಿಸಿ ಎಂದು ಎಚ್ಚರಿಸಿದ್ದಾರೆ.

ಘನತೆಯನ್ನು ಕಾಪಾಡಬೇಕು

ರಾಜ್ಯಪಾಲರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಎಎಪಿ ನಾಯಕ ಮಲ್ವಿಂದರ್​ ಸಿಂಗ್​ ಕಂಗಾ ಭಾರತದ ಸಂವಿಧಾನವು ಚುನಾಯಿತ ಜನಪ್ರತಿನಿಧಿಗಳಿಗೆ ಅಧಿಕಾರವನ್ನು ನೀಡುತ್ತದೆ. ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಯನ್ನು ಹೇರುತ್ತೇನೆ ಎಂದು ಹೇಳುತ್ತಿರುವುದು ನೋಡಿದರೆ ಇದರ ಹಿಂದೆ ಬಿಜೆಪಿಯ ಅಜೆಂಡಾ ಎದ್ದು ಕಾಣಿಸುತ್ತಿದೆ. ದಯವಿಟ್ಟು ಅವರು ರಾಜಕೀಯ ಮಾಡುವ ಬದಲು ಆ ಸ್ಥಾನದ ಘನತೆಯನ್ನು ಕಾಪಾಡಬೇಕು.

ಒಂದು ವೇಳೆ ಇವರು ರಾಷ್ಟ್ರಪತಿ ಆಳ್ವಿಕೆಯನ್ನು ಶಿಫಾರಸ್ಸು ಮಾಡಬೇಕಿದ್ದರೆ ಮೊದಲು ಮಣಿಪುರ ಹಾಗೂ ಹರಿಯಾಣದಲ್ಲಿ ಹೇರಲಿ. ಪಂಜಾಬ್​ ಸರ್ಕಾರವು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ರಾಜ್ಯಪಾಲರಿಗೆ ಬಿಜೆಪಿಯೇತರ ಸರ್ಕಾರಕ್ಕೆ ಈ ರೀತಿ ಕಿರುಕುಳ ನೀಡುವ ಬದಲು ತಮ್ಮ ಕೆಲಸವನ್ನು ಸರಿಯಾಗಿ ನಿಭಾಯಿಸಿ ಎಂದು ಎಎಪಿ ನಾಯಕ ಮಲ್ವಿಂದರ್​ ಸಿಂಗ್​ ಕಂಗಾ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net