

ಶಿವಮೊಗ್ಗ: ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿನ ಗಲಭೆ ವಿಚಾರದಲ್ಲಿ ಕಾಂಗ್ರೆಸ್ ನಡೆ ಕುರಿತು ಸಚಿವ ಕೆ.ಎಸ್.ಈಶ್ವರಪ್ಪ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕ ಜಮೀರ್ ಅಹ್ಮದ್ ಒಬ್ಬ ರಾಷ್ಟ್ರದ್ರೋಹಿ ಎಂದ ಅವರು, ಕಾಂಗ್ರೆಸ್ ರಾಷ್ಟ್ರೀಯ ಮೌಲ್ಯವರ್ಧಿತ ರಾಜಕಾರಣ ಮಾಡದ ಪರಿಣಾಮ ಬೆಂಗಳೂರು ಹೊತ್ತಿ ಉರಿಯುತ್ತಿದೆ. ಮುಂದಿನ ದಿನಗಳಲ್ಲಿ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತಷ್ಟು ಅಧೋಗತಿಗೆ ಇಳಿಯಲಿದೆ ಎಂದು ಎಚ್ಚರಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ಏರ್ಪಡಿಸಿದ್ದ ಈಶ್ವರಪ್ಪ, 'ಶಾಸಕ ಜಮೀರ್ ಅಹ್ಮದ್ ಒಬ್ಬ ರಾಷ್ಟ್ರದ್ರೋಹಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಮುಸ್ಲಿಮರ ನಾಯಕತ್ವ ವಹಿಸಿಕೊಳ್ಳಲು ಮುಂದಾಗಿದ್ದಾರೆ. ಗಲಭೆಕೋರರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆಯೋ ವಿನಃ ರಾಷ್ಟ್ರಭಕ್ತರ ಮೇಲಲ್ಲ. ಅದನ್ನು ಜಮೀರ್ ಅಹ್ಮದ್ ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದರು.
ಇದನ್ನೂ ಓದಿರಿ ಬೆಂಗಳೂರು ಗಲಭೆಕೋರರು ಬಳ್ಳಾರಿ ಜೈಲಿಗೆ ಶಿಫ್ಟ್
ಶಾಸಕ ಅಖಂಡ ಶ್ರೀನಿವಾಸ್ ಅವರು ದೂರು ನೀಡಲ್ಲವೆಂದು ಹೇಳಿದ್ದಾರೆ. ಇದು ಗಲಭೆಕೋರರಿಗೆ ಮತ್ತಷ್ಟು ಬೆಂಬಲ ಸೂಚಿಸಿದಂತಾಗುತ್ತದೆ. ಕಾಂಗ್ರೆಸ್ ಸಹ ದೂರು ನೀಡಲು ಮುಂದಾಗಿಲ್ಲ. ಇಂತಹ ನೀಚ ರಾಜಕಾರಣವನ್ನು ಬಿಟ್ಟು ರಾಷ್ಟ್ರಿಯ ಮೌಲ್ಯದ ರಾಜಕಾರಣವನ್ನು ಕಾಂಗ್ರೆಸ್ ಮಾಡಬೇಕೆಂದು ಸಲಹೆ ನೀಡಿದರು.
ರಾಜ್ಯಾದ್ಯಂತ ಎಸ್ಡಿಪಿಐ ನಿಷೇಧಿಸುವಂತೆ ಎಲ್ಲಡೆ ಒತ್ತಡ ಬರುತ್ತಿದೆ. ಅದರಂತೆ ಆ.20ರಂದು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಎರಡು ಆಯ್ಕೆಗಳಿದ್ದು ಉತ್ತರ ಪ್ರದೇಶ ಮಾದರಿಯಲ್ಲಿ ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ಹಾಗೂ ಎಸ್ಡಿಪಿಐ ಸೇರಿ ದೇಶ ವಿರೋಧಿ ಸಂಘಟನೆಗಳನ್ನು ನಿಷೇಧಿಸುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.