More

    ಮದ್ವೆಯಾದ ಒಂದೇ ತಿಂಗಳಲ್ಲಿ ಡಿವೋರ್ಸ್​!? ಮನಸ್ಸಿಗೆ ನೋವಾಗಿದೆ ಎಂದು ಕಣ್ಣೀರಿಟ್ಟ ಬಿಗಿಲ್​ ಪಾಂಡಿಯಮ್ಮ

    ಚೆನ್ನೈ: ಕಾಲಿವುಡ್​ನ ಖ್ಯಾತ ಹಾಸ್ಯ ನಟ ರೋಬೋ ಶಂಕರ್​ ಅವರ ಪುತ್ರಿ ಹಾಗೂ ನಟಿ ಇಂದ್ರಜಾ ಶಂಕರ್​ ಇತ್ತೀಚೆಗಷ್ಟೇ ಚೆನ್ನೈನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಚಿತ್ರರಂಗದ ಗಣ್ಯರು ಸಹ ಭಾಗವಹಿಸಿ ಆಶೀರ್ವದಿಸಿದರು. ಆದರೆ, ಮದುವೆಯಾದ ಒಂದೇ ತಿಂಗಳಲ್ಲಿ ಇಂದ್ರಜಾ ಅವರ ಡಿವೋರ್ಸ್​ ಕುರಿತಾದ ವದಂತಿ ಎಲ್ಲೆಡೆ ಹರಿದಾಡುತ್ತಿದ್ದು, ಕೊನೆಗೂ ಈ ಬಗ್ಗೆ ಇಂದ್ರಜಾ ಸ್ಪಷ್ಟನೆ ನೀಡಿದ್ದಾರೆ.

    ಅಂದಹಾಗೆ ಇಳಯದಳಪತಿ ವಿಜಯ್​ ನಟನೆಯ ಸೂಪರ್​ ಹಿಟ್​ ಸಿನಿಮಾ “ಬಿಗಿಲ್​” ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಖ್ಯಾತ ನಿರ್ದೇಶಕ ಆಟ್ಲೀ ಕಲ್ಪನೆಯಲ್ಲಿ ಮೂಡಿಬಂದ ಈ ಸಿನಿಮಾ 2019ರ ಅಕ್ಟೋಬರ್​ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಲೇಡಿ ಸೂಪರ್ ಸ್ಟಾರ್​ ನಯನತಾರಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದರು. ಕ್ರೀಡೆ ಆಧಾರಿತ ಸಿನಿಮಾ ಆಗಿದ್ದು, ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿತು. ಈ ಸಿನಿಮಾದ ಪ್ರತಿಯೊಂದು ಪಾತ್ರವು ಕೂಡ ಪ್ರೇಕ್ಷಕರನ್ನು ಹುರಿದುಂಬಿಸಿತು. ಮಹಿಳೆಯರು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಫುಟ್​ಬಾಲ್​ ಆಡಿ, ಟ್ರೋಫಿ ಗೆಲ್ಲುವುದು ಚಿತ್ರದ ಕತೆಯಾಗಿದ್ದು, ನಟ ವಿಜಯ್​ ಕೋಚ್​ ಆಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಸಾಮಾಜಿಕ ಸಂದೇಶವೂ ಇದ್ದು, ವಿಜಯ್​ ದ್ವಿಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಸೂಪರ್​ ಡೂಪರ್​ ಹಿಟ್​ ಆಯಿತು. ಈ ಸಿನಿಮಾದಲ್ಲಿ ತುಂಬಾ ಗಮನ ಸೆಳೆಯುವ ಪಾತ್ರಗಳಲ್ಲಿ ಪಾಂಡಿಯಮ್ಮನ ಪಾತ್ರವೂ ಕೂಡ ಒಂದು. ತನ್ನ ದೈತ್ಯ ದೇಹದೊಂದಿಗೆ ಫುಟ್​ಬಾಲ್​ ಆಡುವ ಪಾಂಡಿಯಮ್ಮ ಅಲ್ಲಲ್ಲಿ ಕಾಮಿಡಿ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಾಳೆ. ಅದರಲ್ಲೂ ನಟ ವಿಜಯ್​ ಅವರು ಪಾಂಡಿಯಮ್ಮಳನ್ನು ಕಿಚಾಯಿಸುವ ದೃಶ್ಯ ನೋಡುಗರಿಗೆ ತುಂಬಾ ಮಜಾ ಕೊಡುತ್ತದೆ.

    ಅಂದಹಾಗೆ ಪಾಂಡಿಯಮ್ಮಳ ಪಾತ್ರವನ್ನು ಮಾಡಿದ್ದು ಇಂದ್ರಜಾ ಶಂಕರ್​. ಇಂದ್ರಜಾ ಬಿಗಿಲ್​ ಮಾತ್ರವಲ್ಲದೇ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಬಿಗಿಲ್​ ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿದೆ. ಕಳೆದ ಮಾರ್ಚ್​ 24ರಂದು ಇಂದ್ರಜಾ, ತನ್ನ ಸ್ನೇಹಿತ ಹಾಗೂ ನಿರ್ದೇಶಕ ಕಾರ್ತಿಕ್​ ಎಂಬವರನ್ನು ಮದುವೆಯಾದರು. ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಸಂಬಂಧಿಕರು, ಸೆಲೆಬ್ರಿಟಿಗಳು ಹಾಗೂ ಆಪ್ತ ಬಳಗ ಭಾಗವಹಿಸಿ, ನವಜೋಡಿಗೆ ಶುಭ ಹಾರೈಸಿದರು. ಇಂದ್ರಜಾ ಮತ್ತು ಕಾರ್ತಿಕ್​ ನಡುವೆ 15 ವರ್ಷ ವಯಸ್ಸಿನ ಅಂತರವಿದೆ. ಇಂದ್ರಜಾ ಅವರು ತಮ್ಮ ಮದುವೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದರು. ಸಿಕ್ಕಾಪಟ್ಟೆ ವೈರಲ್​ ಆಗಿ, ಅಭಿನಂದನೆಯ ಮಹಾಪೂರವೇ ಹರಿದುಬಂತು.

    ಮದುವೆಯಾದ ಒಂದೇ ತಿಂಗಳಿಗೆ ಡಿವೋರ್ಸ್​
    ಇದರ ನಡುವೆ ಪಾಂಡಿಯಮ್ಮಳ ವಿವಾಹ ಸಂಭ್ರಮದ ವಿಡಿಯೋ ವೈರಲ್​ ಆಗಿ, ವಿವಾದಕ್ಕೆ ಗುರಿಯಾಗಿತ್ತು. ವಿಡಿಯೋ ನೋಡಿದ ಅನೇಕರು ಒಂದು ಕ್ಷಣ ಶಾಕ್​ ಆದರು. ರೋಬೋ ಶಂಕರ್​ ಪತ್ನಿ ಪ್ರಿಯಾಂಕಾ ಶಂಕರ್​ ಅವರು ತಮ್ಮ ಅಳಿಯನ ತುಟಿಗೆ ಮುತ್ತು ನೀಡುತ್ತಾರೆ. ಮದುವೆ ಆರತಕ್ಷತೆಯ ದಿನ ಸೆರೆಹಿಡಿಯಲಾದ ವಿಡಿಯೋ ಇದಾಗಿದೆ. ಅಳಿಯನ ಜತೆ ಡಾನ್ಸ್​ ಮಾಡುವ ಪ್ರಿಯಾಂಕಾ ಶಂಕರ್​, ಅಳಿಯನ ತುಟಿಗೆ ಚುಂಬಿಸುತ್ತಾರೆ. ವಿಡಿಯೋ ವೈರಲ್​ ಆಗಿ, ಪರ-ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಯಾವ ಸಂಸ್ಕೃತಿಯಲ್ಲಿ ನಾವು ಜೀವಿಸುತ್ತಿದ್ದೇವೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಇಂದ್ರಜಾ ತನ್ನ ತಂದೆಗೆ ಮುತ್ತಿಡುವ ದೃಶ್ಯವೂ ಕೂಡ ಟೀಕೆಗೆ ಗುರಿಯಾಗಿತ್ತು. ಅಂದಿನಿಂದ ಇಂದ್ರಜಾ-ಕಾರ್ತಿಕ್​ ಜೋಡಿ ನಿರಂತರವಾಗಿ ಟೀಕೆಗೆ ಗುರಿಯಾಗುತ್ತಲೇ ಇದೆ. ಇತ್ತೀಚೆಗೆ ಇಂದ್ರಜಾ, ಕಾರ್ತಿಕ್​ ಜತೆಗಿರುವ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದರು. ಈ ಫೋಟೋಗಳಿಗೆ ಪಾಸಿಟಿವ್​ ಕಾಮೆಂಟ್​ಗಳಿಗಿಂತ ನೆಗಿಟಿವ್​ ಕಾಮೆಂಟ್​ಗಳೇ ಹೆಚ್ಚಾಗಿ ಬರುತ್ತಿವೆ. ಅದರಲ್ಲೂ ಮದುವೆಯಾದ ಒಂದೇ ತಿಂಗಳಿಗೆ ಇಬ್ಬರು ಬೇರೆಯಾಗುತ್ತಾರೆ ಅಂತಾನೂ ಕಾಮೆಂಟ್​ ಮಾಡಿದ್ದು, ಇದರಿಂದ ಇಂದ್ರಜಾ ಸಹ ಬೇಸರಗೊಂಡಿದ್ದಾರೆ.

    ಮದುವೆ ಬಳಿಕ ಇಂದ್ರಜಾ ಮತ್ತು ಕಾರ್ತಿಕ್​ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇದರ ಬಗ್ಗೆಯೂ ಕುಹಕವಾಡಿದ್ದ ನೆಟ್ಟಿಗನೊಬ್ಬ ಸ್ವಲ್ಪ ದಿನ ಕಾಯಿರಿ ಈಗ ಒಟ್ಟಿಗೆ ಇರುವ ಈ ಇಬ್ಬರನ್ನು ಪ್ರತ್ಯೇಕವಾಗಿ ಸಂದರ್ಶನ ಮಾಡುತ್ತೀರಿ. ಕೆಲವೇ ತಿಂಗಳಲ್ಲಿ ಡಿವೋರ್ಸ್​ ಆಗಲಿದ್ದಾರೆ ಎಂದು ಕಾಮೆಂಟ್​ ಮಾಡಿದ್ದಾರೆ. ಇದನ್ನು ಸಂದರ್ಶನವೊಂದರಲ್ಲಿ ಮೆಲಕು ಹಾಕಿರುವ ಇಂದ್ರಜಾ ಇಂತಹ ಕಾಮೆಂಟ್​ಗಳಿಂದ ನನ್ನ ಮನಸ್ಸು ತುಂಬಾ ಘಾಸಿಯಾಗಿದೆ. ಒಬ್ಬರ ಬಗ್ಗೆ ಇಷ್ಟು ಹಗುರವಾಗಿ ಯಾಕೆ ಮಾತನಾಡಬೇಕು? ನಮಗೂ ಮನಸ್ಸಿಲ್ಲವೇ? ಅದಕ್ಕೂ ನೋವಾಗುವುದಿಲ್ಲವೇ? ಎಂದು ಇಂದ್ರಜಾ ಸಂದರ್ಶನದಲ್ಲಿ ಕಣ್ಣೀರು ಹಾಕಿದ್ದಾರೆ.

    ಲಿಪ್​ಲಾಕ್​ ವಿವಾದದ ಬಗ್ಗೆ ಅಳಿಯನ ಸ್ಪಷ್ಟನೆ
    ಲಿಪ್​ಲಾಕ್​ ವಿವಾದದ ಬಗ್ಗೆ ಇಂದ್ರಜಾ ಪತಿ ಕಾರ್ತಿಕ್​ ಕೊನೆಗೂ ಮೌನ ಮುರಿದಿದ್ದಾರೆ. ಅತ್ತೆಗೆ ಮುತ್ತು ಕೊಟ್ಟ ವಿಚಾರದಲ್ಲಿ ಸಾಕಷ್ಟು ನೆಗಿಟಿವ್​ ಕಾಮೆಂಟ್​ಗಳು ಹರಿದಾಡಿವೆ. ಸಾರ್ವಜನಿಕವಾಗಿ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಕೆಲವರು ಸಲಹೆ ನೀಡಿದ್ದಾರೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ನಾನದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಮದುವೆ ಸಮಾರಂಭದಲ್ಲಿ ಹಾಡಿಗೆ ಖುಷಿಯಿಂದ ಹೆಜ್ಜೆ ಹಾಕುತ್ತಿದ್ದೆವು. ಆಗ ನನ್ನ ಅತ್ತೆ ನನ್ನ ಕೆನ್ನೆಗೆ ಮುತ್ತಿಡಲು ಬಂದರು ನಾನು ಅದೇ ಸಮಯದಲ್ಲಿ ತಿರುಗಿದ್ದರಿಂದ ತುಟಿಗೆ ತುಟಿ ತಾಕಿತು. ಅನೇಕ ಜನರು ಇದರ ಸ್ಕ್ರೀನ್‌ಶಾಟ್‌ಗಳನ್ನು ನನಗೆ ಕಳುಹಿಸಿದಾಗಲೇ ಈ ವಿಚಾರ ನನಗೆ ಗೊತ್ತಾಯಿತು. ಆದರೆ, ಅದು ಯಾವಾಗ ಸಂಭವಿಸಿತು ಎಂದು ನನಗೆ ತಿಳಿದಿರಲಿಲ್ಲ. ಇದು ಗೊತ್ತಾದಾಗ ನಾವು ಕುಟುಂಬವಾಗಿ ಕುಳಿತು ಚರ್ಚಿಸಿದ್ದೇವೆ. ಇದು ಆಕಸ್ಮಿಕವಾಗಿ ಸಂಭವಿಸಿದೆ. ಆದರೆ ಕೆಲವರು ನೆಗಿಟಿವ್​ ಆಗಿ ಮಾತನಾಡುತ್ತಿದ್ದಾರೆ ಎಂದು ಕಾರ್ತಿಕ್​ ಬೇಸರ ಹೊರಹಾಕಿದ್ದಾರೆ.

    ಅಂದಹಾಗೆ ಇಂದ್ರಜಾ ಮತ್ತು ಕಾರ್ತಿಕ್ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಈ ವಿಚಾರವನ್ನು ಸ್ವತಃ ಇಂದ್ರಜಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತನ್ನ ತಂದೆ-ತಾಯಿಗಿಂತ ಕಾರ್ತಿಕ್​ ಹೆಚ್ಚಾಗಿ ಬೆಂಬಲಿಸುವ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ. ಮೊದಲು ಪ್ರಪೋಸ್ ಮಾಡಿದ್ದೇ ನಾನು ನಾಲ್ಕು ತಿಂಗಳ ನಂತರ ಕಾರ್ತಿಕ್ ಪ್ರೀತಿಯನ್ನು ಒಪ್ಪಿಕೊಂಡ ಎಂದು ಹೇಳಿದ್ದಾರೆ. ಅಂದಹಾಗೆ ಇಂದ್ರಜಾಗೆ ಕೇವಲ 20 ವರ್ಷ ವಯಸ್ಸು. 2003ರ ಮೇ 17ರಂದು ಜನಿಸಿದರು. ಕೇವಲ 20 ವರ್ಷ ವಯಸ್ಸು ಎಂಬುದನ್ನು ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

    ಇಂದ್ರಜಾ ಅವರ ತಂದೆ ಶಂಕರ್​, ರೋಬೋ ಡ್ಯಾನ್ಸ್‌ಗೆ ಫೇಮಸ್ ಆಗಿರುವುದರಿಂದ ಅವರನ್ನು ಎಲ್ಲರೂ ರೋಬೋ ಶಂಕರ್ ಎಂದೇ ಕರೆಯುತ್ತಾರೆ. ಅಲ್ಲದೆ, ಕಾಮಿಡಿಯನ್​ ಕೂಡ ಆಗಿದ್ದಾರೆ. (ಏಜೆನ್ಸೀಸ್​)

    ಅತ್ತೆ ಜತೆ ಅಳಿಯನ ಲಿಪ್​ಲಾಕ್​! ಕೊನೆಗೂ ಮೌನ ಮುರಿದ ಬಿಗಿಲ್​ ಪಾಂಡಿಯಮ್ಮಳ ಪತಿ

    ಅಳಿಯನ ಜತೆ ಅತ್ತೆ ಲಿಪ್​ಲಾಕ್​! ಬಿಗಿಲ್​ ಪಾಂಡಿಯಮ್ಮಳ ತಾಯಿ, ಗಂಡನ ಕಿಸ್ಸಿಂಗ್​ ವಿಡಿಯೋ ವೈರಲ್​, ತೀವ್ರ ಟೀಕೆ

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗಿಲ್​ ಪಾಂಡಿಯಮ್ಮ! ವಯಸ್ಸು ಕೇಳಿ ದಂಗಾದ ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts