ದೈವನರ್ತನ ಕಲಾವಿದ ಮೃತ್ಯು, ಸ್ನೇಹಿತ ಬಂಧನ

arrested
Published on

ಕಾಸರಗೋಡು: ಅಡೂರು ಸನಿಹದ ಉರುಡೂರು ಚಂದನಕ್ಕಡ್ ನಿವಾಸಿ, ದೈವನರ್ತನ ಕಲಾವಿದ ಸತೀಶ್ ಟಿ.ಯಾನೆ ಬಿಜು(46)ಎಂಬುವರ ಸಾವು ಕೊಲೆ ಕೃತ್ಯವೆಂದು ಶವಮಹಜರು ವರದಿಯಲ್ಲಿ ಸಾಬೀತಾಗಿದೆ.

ಕತ್ತಿನ ಭಾಗದ ಎಲುಬು ಮುರಿತ ಸಾವಿಗೆ ಕಾರಣವೆನ್ನಲಾಗಿದೆ. ಮೃತದೇಹದಲ್ಲಿ ಗಾಯದ ಗುರುತು ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸತೀಶನ್ ಅವರ ಸ್ನೇಹಿತ ಚಂದನಕ್ಕಾಡ್ ನಿವಾಸಿ ಚಿದಾನಂದ ಎಂಬಾತನನ್ನು ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸತೀಶ್ ಅವರನ್ನು ಅಸೌಖ್ಯಗೊಂಡ ಸ್ಥಿತಿಯಲ್ಲಿ ನೆರೆಮನೆ ನಿವಾಸಿ ಚೋಮಣ್ಣ ನಾಯ್ಕ ಎಂಬುವರ ಮನೆ ವರಾಂಡದಲ್ಲಿ ಪತ್ತೆ ಹಚ್ಚಲಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ. ಸತೀಶನ್ ಹಾಗೂ ಚಿದಾನಂದ ಇಬ್ಬರೂ ಸೋಮವಾರ ನೆರೆಮನೆ ನಿವಾಸಿ ಚೋಮಣ್ಣ ನಾಯ್ಕ ಎಂಬುವರ ಮನೆ ವರಾಂಡದಲ್ಲಿ ಕುಳಿತು ಮದ್ಯ ಸೇವಿಸಿದ್ದಾರೆ. ಮದ್ಯದ ನಶೆಯಲ್ಲಿ ಅವರ ಮಧ್ಯೆ ವಾಗ್ವಾದ ಉಂಟಾಗಿ ಸತೀಶನ್ ಅವರನ್ನು ಚಿದಾನಂದ ದೂಡಿ ಹಾಕಿದ ಪರಿಣಾಮ ಕತ್ತಿನ ಭಾಗಕ್ಕೆ ಗಾಯ ಉಂಟಾಗಿದೆ. ಸತೀಶ್ ಅವರ ಸಹೋದರಿ ಮನೆಗೆ ಆಗಮಿಸಿದಾಗ ಸತೀಶ್ ಮನೆಯಲ್ಲಿರಲಿಲ್ಲ. ಹುಡುಕಾಡುವ ಮಧ್ಯೆ ನೆರೆಮನೆಯ ಚಾವಡಿಯಲ್ಲಿ ಅಸೌಖ್ಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆಸ್ಪತ್ರೆಗೆ ದಾಖಲಿಸಿದ್ದರು. ಚಿದಾನಂದನ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net