

ನವದೆಹಲಿ: ಶಿಕ್ಷಕನೊಬ್ಬ ಎರಡು ವರ್ಷಗಳಿಂದ ಸಂಬಳ ಸಿಕ್ಕಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಆತನ ಡೆತ್ ನೋಟ್ನಲ್ಲಿ ಬಿಜೆಪಿಯ ಮಾಜಿ ಶಾಸಕ ಹಾಗೂ ಆತನ ಪತ್ನಿಯ ಹೆಸರಿರುವುದಾಗಿ ಹೇಳಲಾಗಿದೆ.
ರೋಹಿಣಿ ಪ್ರದೇಶದ ಖಾಸಗಿ ಶಾಲೆಯೊಂದರ ಶಿಕ್ಷಕ ತನೂಪ್ ಜೋಹರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ, ಸಹೋದರ ಹಾಗೂ ಹೆಂಡತಿಯೊಂದಿಗೆ ಜೀವನ ನಡೆಸುತ್ತಿದ್ದ ಅವರು ತಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಯುವುದಕ್ಕೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಎರಡು ವರ್ಷಗಳಿಂದ ಸಂಬಳಕ್ಕಾಗಿ ಕೇಳಿದರೂ ಶಾಲೆಯ ಆಡಳಿತದವರು ಸಂಬಳ ಕೊಡುತ್ತಿಲ್ಲ. ನಮ್ಮ ಶಾಲೆ ಬಿಜೆಪಿ ಮಾಜಿ ಶಾಸಕ ಹಾಗೂ ಅವರ ಪತ್ನಿಗೆ ಸೇರಿದ್ದು, ನನ್ನ ಸಾವಿಗೆ ಅವರೇ ಕಾರಣ ಎಂದು ಅವರು ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಶಾಲೆಯ ಆಡಳಿತ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಈ ಹಿಂದೆ 2020ರಲ್ಲಿಯೇ ತನೂಪ್ ತಾವು ಕೆಲಸ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಯಿಂದ ಸಂಬಳ ಬಂದಿಲ್ಲವೆಂದು ನ್ಯಾಯಾಲಯಕ್ಕೆ ಮೊಕದ್ದಮೆ ಹೂಡಿದ್ದರು. ಆದರೆ ಎಚ್ಚೆತ್ತುಕೊಳ್ಳದ ಆಡಳಿತ, ಅವರಿಂದ ಆನ್ಲೈನ್ ತರಗತಿಗಳನ್ನು ಮಾಡಿಸುತ್ತಿತ್ತೇ ಹೊರೆತು ಸಂಬಳ ಕೊಟ್ಟಿರಲಿಲ್ಲ ಎಂದು ಆತನ ಕುಟುಂಬಸ್ಥರು ದೂರಿದ್ದಾರೆ. (ಏಜೆನ್ಸೀಸ್)