

ಚಿಕ್ಕಬಳ್ಳಾಪುರ: ಮಾದಕ ವಸ್ತುಗಳನ್ನು ಮಾರುತ್ತಿದ್ದ ತಂದೆ, ಮಗಳು, ಮೊಮ್ಮಗ ಸೇರಿ ಐವರನ್ನು ಬಂಧಿಸಿರುವ ಪೊಲೀಸರು 17.50 ಲಕ್ಷ ರೂ. ಮೌಲ್ಯದ 35.645 ಕೆ.ಜಿ. ಗಾಂಜಾ ಹಾಗೂ ಆಂಧ್ರಪ್ರದೇಶ ನೋಂದಣಿಯ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಪಲ್ಲಿಗುಂಡೆಯ ಮಾರಪ್ಪ (63), ಈತನ ಮಗಳು ಗೆರಗಿರೆಡ್ಡಿ ಪಾಳ್ಯದ ದೇವಮ್ಮ (38), ಮೊಮ್ಮಗ ಆಂಜಿ (18), ಗೆರಗಿರೆಡ್ಡಿ ಪಾಳ್ಯದ ಆದಿನಾರಾಯಣ (26), ಆಂಧ್ರಪ್ರದೇಶದ ಚಿಂತಮಾಕಲಪಲ್ಲಿಯ ವೆಂಕಟರಮಣ (24) ಬಂಧಿತರು. ಇವರು ಹಲವು ವರ್ಷಗಳಿಂದ ಮಾದಕ ವಸ್ತುಗಳ ದಂಧೆಯಲ್ಲಿ ತೊಡಗಿದ್ದು, ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಪೊಲೀಸರ ಕಾರ್ಯಾಚರಣೆ
ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಮೂಲಕ ವಾಹನದಲ್ಲಿ ಮಾದಕವಸ್ತು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಅಪರಾಧ ದಳದ ಡಿವೈಎಸ್ಪಿ ಕೆ.ವೈ. ರವಿಕುಮಾರ್, ಇನ್‌ಸ್ಪೆಕ್ಟರ್ ಸೂರ್ಯಪ್ರಕಾಶ್, ಎಎಸ್‌ಐ ವಿ.ಸುಬ್ರಮಣಿ, ಸಿಬ್ಬಂದಿಗಳಾದ ಕೃಷ್ಣಪ್ಪ, ಅಂಬರೀಶ್, ನಾರಾಯಣಸ್ವಾಮಿ, ಜವರಪ್ಪ ಪರಸಂಗಿ, ಬಾರೇಶ ವಲ್ಲಿ, ಬಾಲಾಜಿ, ಭಾಗ್ಯಮ್ಮ, ಮಹಬೂಬ್ ಭಾಷಾ ಒಳಗೊಂಡ ತಂಡ ಮಂಗಳವಾರ ರಾತ್ರಿ ಕಾರ್ಯಾಚರಣೆ ಕೈಗೊಂಡಿದೆ. ಶ್ರೀನಿವಾಸಪುರ ಹಾಗೂ ಚಿಂತಾಮಣಿ ರಸ್ತೆಯ ಮಾಡಿಕೆರೆ ಕ್ರಾಸ್ ಸಮೀಪ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ.
ಮೂಲ ಪತ್ತೆಗೆ ತನಿಖೆ
ಆಂಧ್ರಪ್ರದೇಶ, ಒಡಿಶಾ ಸೇರಿ ವಿವಿಧ ಭಾಗಗಳಿಂದ ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟದ ಹಿನ್ನೆಲೆಯಲ್ಲಿ ಪೊಲೀಸ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದರ ನಡುವೆ 17.50 ಲಕ್ಷ ರೂ. ಮೌಲ್ಯದ ಗಾಂಜಾ ಸಿಕ್ಕಿದ್ದು ಬಂಧಿತ ಐವರಿಂದ ಅಪರಾಧದ ಮೂಲದ ಪತ್ತೆಗಾಗಿ ತನಿಖೆ ಮುಂದುವರಿದಿದೆ. ವಶಪಡಿಸಿಕೊಂಡಿರುವ ಆರೋಪಿಗಳ ಮೊಬೈಲ್‌ಗಳಲ್ಲಿನ ಮಾಹಿತಿ, ಸಂಪರ್ಕಿತರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.
ಬೆಂಗಳೂರು ಸುತ್ತಲಿನ ಭಾಗಗಳಲ್ಲಿ ಮಾದಕ ವಸ್ತುಗಳ ಮಾರಾಟದ ಹಿನ್ನೆಲೆಯಲ್ಲಿ ಆಂಧ್ರದ ವಿಶಾಖಪಟ್ಟಣದಿಂದ ಮಾಲು ಸಾಗಿಸಲಾಗುತ್ತಿತ್ತು. ಆರೋಪಿಗಳ ಹಿನ್ನೆಲೆ, ವ್ಯವಹಾರದಲ್ಲಿ ಇತರರು ಭಾಗಿಯಾಗಿರುವ ಬಗ್ಗೆ ಮಹತ್ವದ ಮಾಹಿತಿಗಾಗಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.