₹1.50 ಲಕ್ಷ ಮೌಲ್ಯದ 5.720 ಕೆ.ಜಿ. ಗಾಂಜಾ ವಶ

FotoJet (3)
Published on

ಮಾದಕವಸ್ತು ಮಾರುತ್ತಿದ್ದ ಮಹಿಳೆ ಬಂಧನ ಕೀರ್ತಿನಗರದ ಮೇಲೆ ಪೊಲೀಸರ ದಾಳಿ

ಚಿಂತಾಮಣಿ: ನಗರದ ಬಡಾವಣೆಯ ಮನೆಯೊಂದರ ಮೇಲೆ ದಾಳಿ ನಡೆಸಿರುವ ನಗರ ಠಾಣೆ ಪೊಲೀಸರು 1.50 ಲಕ್ಷ ರೂ. ಮೌಲ್ಯೆ 5.720 ಕೆ.ಜಿ. ಗಾಂಜಾ ವಶಪಡಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ. ಕೀರ್ತಿ ಬಡಾವಣೆಯ ನಿವಾಸಿ ಶಬಾನಾ ಬಂಧಿತೆ.

ಮಾದಕವಸ್ತು ಮಾರಾಟ, ದಾಸ್ತಾನು ಮತ್ತು ಸಾಗಣೆ ನಿಯಂತ್ರಿಸಬೇಕೆಂಬ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಕುಶಲ್ ಚೌಕ್ಸೆ ಸೂಚನೆ ಮೇರೆಗೆ ಡಿವೈಎಸ್‌ಪಿ ಮುರಳೀಧರ್ ಅವರು ವಿಶೇಷ ತಂಡ ರಚಿಸಿ ಮಾದಕವಸ್ತು ದಾಸ್ತಾನು, ಮಾರಾಟ ಮತ್ತು ಸಾಗಣೆ ಮೇಲೆ ನಿಗಾ ವಹಿಸಲಾಗಿತ್ತು.

ಖಚಿತ ಮಾಹಿತಿ ಆಧರಿಸಿ ಕೀರ್ತಿನಗರದ ಮನೆ ಮೇಲೆ ದಾಳಿ ನಡೆಸಿದ ಪೊಲೀಸರ ತಂಡ ಶಬಾನಾ ಅವರನ್ನು ವಶಕ್ಕೆ ಪಡೆದು, ಮನೆಯಲ್ಲಿ ದಾಸ್ತಾನಿಟ್ಟಿದ್ದ ಗಾಂಜಾ ವಶಪಡಿಸಿಕೊಂಡಿದೆ. ಕಾರ್ಯಾಚರಣೆ ತಂಡದಲ್ಲಿ ನಗರ ಠಾಣೆಯ ಪಿಎಸ್‌ಐಗಳಾದ ನಾರಾಯಣಸ್ವಾಮಿ, ಶಹಾಬುದ್ದೀನ್, ಜಗದೀಶ್, ಸಿಬ್ಬಂದಿ ಶ್ರೀನಿವಾಸ ಮೂರ್ತಿ, ಸುರೇಶ್, ಸುಧಾ, ಮಂಜುನಾಥ್, ಲೋಕೇಶ್, ಮಮತಾ, ಸಿದ್ದಾರೂಢ, ಚಾಲಕ ಸತೀಶ್ ಇದ್ದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಮಾದಕ ವಸ್ತು ಗಾಂಜಾ ಮಾರಾಟ ಸಂಬಂಧ ಶಬಾನಾ ವಿರುದ್ಧ 2019ರಲ್ಲಿ ಎರಡು ಪ್ರಕರಣ, 2020ರಲ್ಲಿ ಎರಡು ಪ್ರಕರಣ, 2022ರಲ್ಲಿ ಎರಡು ಪ್ರಕರಣ ಹಾಗೂ 2025ರಲ್ಲಿ ಒಂದು ಪ್ರಕರಣ ಸೇರಿ ಒಟ್ಟು 7 ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net