

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ ೩೬ ದೌರ್ಜನ್ಯ ಪ್ರಕರಣಗಳ ಪೈಕಿ ೨೭ ಪ್ರಕರಣಗಳಿಗೆ ಒಟ್ಟು ೮೫.೮೭ ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಏಪ್ರೀಲ್ ೧ ರಿಂದ ಡಿಸೆಂಬರ ೩೦ ವರೆಗೆ ೩೬ ಪ್ರಕರಣಗಳು ದಾಖಲಾಗಿದ್ದು, ೨೭ ಪ್ರಕರಣಗಳಿಗೆ ಪರಿಹಾರಧನ ನೀಡಲಾಗಿದೆ. ಇನ್ನು ೯ ಪ್ರಕರಣಗಳಿಗೆ ಮಾತ್ರ ಪರಿಹಾರಧನ ಮಂಜೂರಿಸಲು ಬಾಕಿ ಉಳಿದಿದ್ದು, ಅನುದಾನ ಬಿಡುಗಡೆಯಾದ ನಂತರ ಮಂಜೂರು ಇರಿಸಲಾಗುತ್ತಿದೆ ಎಂದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿರುವ ಎಸ್.ಎಫ್.ಸಿ ಅನುದಾನದಲ್ಲಿ ಶೇ.೨೪.೧೦ ಅನುದಾನ ಸಂಪೂರ್ಣವಾಗಿ ಖರ್ಚು ಮಾಡಬೇಕು. ಅಲ್ಲದೇ ವಿವಿಧ ನಿಗಮಗಳಲ್ಲಿ ಬಾಕಿ ಇರುವ ಬೋರವೆಲ್‌ಗಳಿಗೆ ವಿದ್ಯುದ್ದೀಕರಣ ಕಲ್ಪಿಸಲು ಸೂಚಿಸಿದರು. ಬಾಕಿ ಇರುವ ಒಟ್ಟು ೬೩ ಪೈಕಿ ೩೬ಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದು, ಬಾಕಿ ೨೭ ಇದ್ದು ಜನವರಿ ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಹೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಿಡಿಗೇರ ಮಾತನಾಡಿ, ದೇವದಾಸಿ ಮಕ್ಕಳ ವಿವಾಹ ಪ್ರೋತ್ಸಾಹಧನಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿಗೆ ಒಟ್ಟು ೩೫೦ ಲಕ್ಷ ರೂ.ಗಳ ಅನುದಾನ ಅವಶ್ಯಕತೆ ಇದ್ದು, ಇಲ್ಲಿಯವರೆಗೆ ೧೫೫ ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ೪೧ ದಂಪತಿಗಳಿಗೆ ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ. ಅಲ್ಲದೇ ಡಿಸೆಂಬರ ಮಾಹೆಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ೧೪ ದಂಪತಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗಿದೆ. ಇನ್ನು ೧೧೧ ದಂಪತಿಗಳಿಗೆ ೩೯೫ ಲಕ್ಷ ರೂ.ಗಳ ಅನುದಾನ ಅವಶ್ಯಕತೆ ಇರುವುದಾಗಿ ಸಭೆಗೆ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯವರು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಾಂಗದ ಗ್ರಾಮ ಹಾಗೂ ಕೇರಿಗಳಲ್ಲಿ ಸರ್ಕಾರಿ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಅಧಿಕಾರಿಗಳು ಅರಿವು ಮೂಡಿಸುವ ಕಾರ್ಯ ಮಾಡಬೇಕಿದ್ದು, ಜಿಲ್ಲಾ ಮಟ್ಟದ ಅಧಿಕಾರಿ ಸೇರಿದಂತ ತಾಲೂಕಾ ಮಟ್ಟದ ಅಧಿಕಾರಿಗಳು ಭೇಟಿ ನೀಡುವ ಕಾರ್ಯದ ಬಗ್ಗೆ ತಮ್ಮ ಡೈರಿ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಸಿಂಧುತ್ವ ಪ್ರಮಾಣ ಪತ್ರ ನೀಡುವಲ್ಲಿ ಯಾವುದೇ ರೀತಿಯ ವಿಳಂಬಕ್ಕೆ ಅವಕಾಶ ನೀಡಬಾರದು. ೭ ಬಾಕಿ ಇದ್ದು, ಎರಡು ದಿನದಲ್ಲಿ ವಿಲೆ ಮಾಡಲು ಜಿಲ್ಲಾಽಕಾರಿಗಳು ಸೂಚನೆ ನೀಡಿದರು.
ಇನ್ನು ಸಭೆಯಲ್ಲಿ ದೌರ್ಜನ್ಯ ಪ್ರಕರಣಗಳಿಗೆ ಈ ಹಿಂದೆ ೬ ವಲಯಗಳಲ್ಲಿ ೯ ಕಡೆಗಳಲ್ಲಿ ಪ್ರಕರಣಗಳನ್ನು ತನಿಖೆಗೆ ಕೈಗೊಳ್ಳಲಾಗುತ್ತಿದ್ದು, ಈ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಪ್ರತಿಯೊಂದು ಜಿಲ್ಲೆಗೂ ನಾಗರಿಕ ಜಾರಿ ನಿರ್ದೇಶನಾಲಯದ ಕಾರ್ಯಾಲಯ ಕಾರ್ಯನಿರ್ವಹಿಸಲಿದ್ದು, ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಸಮೀಪದ ಪೊಲೀಸ್ ಠಾಣೆಯಲ್ಲಿ ದಾಖಲಿಸಲು ಅವಕಾಶ ವಿದ್ದು, ಇದು ಏಪ್ರೀಲ್ ೧ ರಿಂದ ಜಾರಿಯಾಗಲಿದೆ ಎಂದು ನಾಗರಿಕ ಜಾರಿ ನಿರ್ದೇಶನಾಲಯದ ಜಿಲ್ಲಾ ಅಽಕಾರಿ ಸಭೆಗೆ ತಿಳಿಸಿದರು.
ಪ್ರಾರಂಭದಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿಗೆ ಆಯ್ಕೆಯಾದ ನೂತನ ಸದಸ್ಯರನ್ನು ಸ್ವಾಗತಿಸಿ ಹುಗುಚ್ಚ ನೀಡಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ, ಜಿ.ಪಂ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಜಿ.ಪಂ ಮುಖ್ಯ ಯೋಜನಾಧಿಕಾರಿ ಪುನೀತ್ ಆರ್, ಉಪವಿಭಾಗಾಧಿಕಾರಿಗಳಾದ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ, ಜಿ.ಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ನಾಮನಿರ್ದೇಶಿತ ಸದಸ್ಯರಾದ ಯಮನಪ್ಪ ಪೂಜಾರ, ಫಕೀರಪ್ಪ ಮಾದರ, ಬಸವರಾಜ ಪಾತ್ರೋಟ, ಗೋವಿಂದಪ್ಪ ಕೌಲಗಿ, ದ್ಯಾಮಣ್ಣ ಗಾಳಿ, ಕಾಂತಗೌಡ ಗೌಡರ, ಅಕ್ಬರ ಮುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.