೭೫ ವಟುಗಳಿಗೆ ಅಯ್ಯಾಚಾರ ಶಿವದೀಕ್ಷೆ

bkt-11-2
ಬಾಗಲಕೋಟೆ ತಾಲೂಕಿನ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಯ್ಯಾಚಾರ ಶಿವದೀಕ್ಷೆ ನೀಡಲಾಯಿತು.
Published on

ಬಾಗಲಕೋಟೆ: ತಾಲೂಕಿನ ಸುಕ್ಷೇತ್ರ ಮುಚಖಂಡಿ ವೀರಭದ್ರೇಶ್ವರ ಕಾರ್ತಿಕೋತ್ಸವ ಮತ್ತು ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ವೀರಭದ್ರೇಶ್ವರ ದೇವಸ್ಥಾನದಲ್ಲಿ ೭೫ ವಟುಗಳಿಗೆ ಅಯ್ಯಾಚಾರ ಶಿವದೀಕ್ಷೆ ನೀಡಲಾಯಿತು.
ವೀರಭದ್ರೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಬಿಲ್‌ಕೆರೂರಿನ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವಟುಗಳಿಗೆ ಅಯ್ಯಾಚಾರ ಮತ್ತು ಶಿವದೀಕ್ಷೆ ನೀಡಲಾಯಿತು. ಧಾರ್ಮಿಕ ಆಚರಣೆ ಮಹತ್ವಗಳ ಬಗ್ಗೆ ತಿಳಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ವೀರಭದ್ರೇಶ್ವರ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗುರುಬಸವ ಸೂಳಿಭಾವಿ ಮಾತನಾಡಿ, ಪ್ರತಿ ವರ್ಷ ಜಾತ್ರಾ ಮಹೋತ್ಸವದ ಅಂಗವಾಗಿ ಅಯ್ಯಾಚಾರ ಮತ್ತು ಶಿವದೀಕ್ಷೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ವಟುಗಳಿಗೆ ಶಿವದೀಕ್ಷೆ ನೀಡಲಾಗುತ್ತಿದೆ. ಈ ಭಾರಿ ೭೫ ವಟುಗಳಿಗೆ ಅಯ್ಯಾಚಾರ ಶಿವದೀಕ್ಷೆ ನೀಡಲಾಯಿತು. ಜಿಲ್ಲೆಯ ಹಾಗೂ ವಿವಿಧ ಭಾಗದಿಂದ ಬರುವ ವಟುಗಳಿಗೆ ಅಯ್ಯಾಚಾರ ಮತ್ತು ಶಿವದೀಕ್ಷೆ ನೀಡುವ ಸಂದರ್ಭದಲ್ಲಿ ಬೇಕಾಗುವ ಸಾಮಾಗ್ರಿಗಳನ್ನು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಿಂದ ಉಚಿತವಾಗಿ ನೀಡಲಾಗುತ್ತದೆ. ಅವರೊಂದಿಗೆ ಬರುವ ಭಕ್ತರು ಹಾಗೂ ಪಾಲಕರಿಗೆ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಯಿತು ಎಂದರು.
ಡಿ.೧೩ ರಂದು ಸಂಜೆ ೫ ಗಂಟೆಗೆ ಕಾರ್ತಿಕೋತ್ಸವದ ಅಂಗವಾಗಿ ಮಹಾರಥೋತ್ಸವ ನಡೆಯಲಿದ್ದು, ರಾಜ್ಯದ ವಿವಿಧ ಭಾಗದಿಂದ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ . ಜಾತ್ರೆಯ ನಿಮಿತ್ತ ಎಲ್ಲ ಸಿದ್ಧತೆಯನ್ನು ಮಾಡಲಾಗಿದೆ ಎಂದು ಹೇಳಿದರು.
ವಿ.ಡಿ.ಗಂಗಾವತಿ, ಅರ್ಚಕರಾದ ಪ್ರಭುಸ್ವಾಮಿ ಸರಗಣಾಚಾರಿ, ರಾಚಯ್ಯ ಸರಗಣಾಚಾರಿ, ಮಲ್ಲಯ್ಯ ಸರಗಣಾಚಾರಿ, ಸಿದ್ಧಯ್ಯ ಮಠ, ಗುರುದೇವ ಶಾಸ್ತ್ರೀ, ಅಲ್ಲಯ್ಯ ಸರಗಣಾಚಾರಿ, ರಂಗಪ್ಪ ಜಳೇಂದ್ರ ಮುಚಖಂಡಿ ಗ್ರಾಮದ ಹಿರಿಯರು, ಯುವಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net