

ಬಾಗಲಕೋಟೆ: ನಗರದ ೫೦ ಹಾಸಿಗೆ ಆಸ್ಪತ್ರೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಸೋಮವಾರ ಭೇಟಿ ನೀಡಿ, ಆಸ್ಪತ್ರೆಯಲ್ಲಿರುವ ಅವ್ಯವಸ್ಥೆ ಸರಪಡಿಸಲು ಸೂಚಿಸಿದರು.
ಭೇಟಿ ಸಮಯದಲ್ಲಿ ಬೆಳಗ್ಗೆ ೯.೩೦ಕ್ಕೆ ಹಾಜರಾಗಬೇಕಿದ್ದ ಡಾ.ಶಿಲ್ಪಾ ಎಸ್ ಮಧ್ಯಾಹ್ನ ೧೨ ಗಂಟೆ ಹಾಜರಾಗಿರುವುದು ತಿಳಿದು ಬಂದಿತು. ಒಂದು ರೋಗಿಯನ್ನು ಸಹ ತಪಾಸಣೆ ಮಾಡದೇ ತಡಮಾಡಿ ಹಾಜರಾಗಿರುದಲ್ಲದೇ ಹಾರಿಕೆ ಉತ್ತರ ನೀಡುತ್ತಿರುವುದನ್ನು ಕಂಡು ಎಚ್ಚರಿಕೆ ನೀಡಿದರು. ಆಸ್ಪತ್ರೆಯಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಇದ್ದರೂ ಸಹ ಸರಿಯಾದ ಸಮಯಕ್ಕೆ ಬಾರದ ವೈದ್ಯಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಸರ್ಕಾರಿ ಕೆಲಸದಲ್ಲಿ ಬೇಜವಾಬ್ದಾರಿ ತೋರುವುದು ಸರಿಯಲ್ಲ. ಸರ್ಕಾರ ನೀಡುವ ಸಂಬಳಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಬಡ ರೋಗಿಗಳು ಆಸ್ಪತ್ರೆಗೆ ಬಂದು ಕುಳಿತು ಕಾಯಿಸುವ ಕೆಲಸವಾಗಬಾರದು. ಮುಖ್ಯವಾಗಿ ಹೆರಿಗೆಗಾಗಿಯೇ ಪ್ರತ್ಯೇಕ ಆಸ್ಪತ್ರೆ ತೆರೆದಿದ್ದು, ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದರೆ ಹೇಗೆ ಎಂದು ಪ್ರಶ್ನಿಸಿದರು. ಅಲ್ಲದೆ ಇತರೆ ವೈದ್ಯಾಽಕಾರಿ, ಸಿಬ್ಬಂದಿಗಳ ಹಾಜರಾತಿಯನ್ನು ಪರಿಶೀಲನೆ ಮಾಡಿದರು.
ವಿವಿಧ ತಪಾಸಣೆ ಕೊಠಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದಂತ ತಪಾಸಣೆ ವಿಭಾಗದಲ್ಲಿ ವೈದ್ಯಾಧಿಕಾರಿಗಳು ತಮ್ಮ ಬ್ಯಾಗನ್ನು ಇಟ್ಟು ಆರಾಮ ಇಲ್ಲವೆಂದು ಹೇಳಿ ತಪಾಸಣೆ ಕೋಣೆಯಲ್ಲಿ ಮಲಗಿರುವುದನ್ನು ಕಂಡು ರಜೆ ಹಾಕಿಕೊಂಡು ಮನೆಯಲ್ಲಿ ಇರುವುದು ಬಿಟ್ಟು ಆಸ್ಪತ್ರೆಗೆ ಬಂದು ಈ ರೀತಿ ಮಾಡುವುದು ಸರಿಯಲ್ಲ ಎಂದರು.
ನಂತರ ಔಷಧಿ ಕೋಣೆಗೆ ತೆರಳಿ ಪರಿಶೀಲನೆ ನಡೆಸಿದರು. ಪ್ರಯೋಗಾಲಯ ಭೇಟಿ ನೀಡಿ ನಿರೀಕ್ಷಿತ ಮಟ್ಟಿಗೆ ಪರೀಕ್ಷೆ ನಡೆಸಿರದ ಬಗ್ಗೆ ಮಾಹಿತಿ ಪಡೆದು ಒಂದು ರೋಗಿಯು ಖಾಸಗಿ ಲ್ಯಾಬ್‌ಗೆ ಬರೆದುಕೊಡುವಂತಿಲ್ಲ. ಲ್ಯಾಬ್‌ಗೆ ಬೇಕಾದ ಕಿಟ್ ಕೊರತೆ ಇದ್ದರೆ ತಿಳಿಸಲು ಹೇಳಿದಾಗ ಸಿಬಿಸಿ ರೆಜೆಂಡ್, ಎಚ್‌ಸಿವಿ ಮತ್ತು ಎಚ್‌ಐವಿ ಕಿಟ್‌ಗಳ ಕೊರತೆ ಇರುವುದಾಗಿ ತಿಳಿಸಿದಾಗ ಈ ಬಗ್ಗೆ ಕ್ರಮವಹಿಸಲಾಗುವುದೆಂದು ತಿಳಿಸಿದರು. ಮತ್ತೊಮ್ಮೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಬದಲಾವಣೆ ಆಗಿರಬೇಕು ಎಂದು ಹೇಳಿದರು.