

ಬಾಗಲಕೋಟೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಅ.೨೯ ನಡೆಸಲಾಗುವ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಒಟ್ಟು ೪೭ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಜರುಗಿದ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ಪರೀಕ್ಷೆಯ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ೯ ತಾಲೂಕುಗಳಲ್ಲಿ ಪರೀಕ್ಷಾ ಕೇಂದ್ರಗಳು ಇದ್ದು, ಒಟ್ಟಾರೆ ಮೊದಲ ಪತ್ರಿಕೆಗೆ ೨೧೬೨೦ ಹಾಗೂ ಎರಡನೆ ಪತ್ರಿಕೆಗೆ ೨೧೫೩೪ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆಯಾ ಕಾಲೇಜಿನ ಪ್ರಾಚಾರ್ಯರನ್ನೆ ಉಪಮುಖ್ಯ ಅಧೀಕ್ಷಕರನ್ನಾಗಿ ಮಾಡಲಾಗಿದ್ದು, ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಾಗಿ ಗಂಬೀರತೆಯಿಂದ ಪರೀಕ್ಷೆಯನ್ನು ಸುಗಮವಾಗಿ ನಡೆಸಬೇಕು. ಪರೀಕ್ಷಾರ್ಥಿಗಳು ಸೇರಿ ಕೊಠಡಿ ಮೇಲ್ವಿಚಾರಕರು ಮತ್ತು ಕಚೇರಿ ಸಿಬ್ಬಂದಿಗೆ ಮೊಬೈಲ್ ಅಥವಾ ಇನ್ನಿತರೇ ಡಿಜಿಟಲ್ ಉಪಕರಣಗಳ ಬಳಕೆಗೆ ಅವಕಾಶವಿರುವದಿಲ್ಲ. ಅಭ್ಯರ್ಥಿಗಳು ಪ್ರವೇಶ ಪತ್ರ, ಗುರುತಿನ ಚೀಟಿ ಹಾಗೂ ಎರಡು ಬಾಲ್ ಪೆನ್ ಹೊರತುಪಡಿಸಿ ಇನ್ಯಾವುದೇ ವಸ್ತು ತರುವಂತಿಲ್ಲ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ವ್ಯವಸ್ಥೆ ಇರತಕ್ಕದ್ದು, ಇಲ್ಲದ ಕಡೆ ವಿಡಿಯೋಗ್ರಾಪಿಯ ವ್ಯವಸ್ಥೆಯಾಗಬೇಕು ಎಂದು ಸೂಚಿಸಿದರು.
ಪರೀಕ್ಷಾ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯವರ ಸಂಬಂಧಿಕರು ಪರೀಕ್ಷೆ ಬರೆಯುತ್ತಿದ್ದರೆ ಅಂತಹ ಸಿಬ್ಬಂದಿಯನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸುವಂತಿಲ್ಲ. ಕೊಠಡಿ ಮೇಲ್ವಿಚಾಕರಿಗೆ ಕೊಠಡಿಯನ್ನು ಲಾಟರಿ ಮೂಲಕ ಹಂಚುವ ಕೆಲಸ ಮಾಡಬೇಕು . ಕೆಇಎ ಎಲ್ಲ ಗೈಡಲೈನ್ಸ್ ಗಳನ್ನು ಪಾಲಿಸುವ ಮೂಲಕ ಎಸ್ ಡಿ ಸಿ ನೇಮಕಾತಿ ಪರೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್, ಡಿಡಿಪಿಯು ಶಿವಾನಂದ ಪಟ್ಟಣಶೆಟ್ಟಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರ ಮತ್ತು ಸಿಬ್ಬಂದಿ ಇದ್ದರು.