

ಬಾಗಲಕೋಟೆ: ಜಿಲ್ಲಾ ನ್ಯಾಯಾಲಯದ ಅಧೀನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಭೂಸ್ವಾಧೀನಕ್ಕೆ ಸಂಬಂಽಸಿದ ಒಟ್ಟು ೪೦ ಜನ ಸಂತ್ರಸ್ತರಿಗೆ ಸ್ಥಳದಲ್ಲಿಯೇ ಪರಿಹಾರಧನದ ಚೆಕ್ ಒದಗಿಸುವ ಕಾರ್ಯ ಮಾಡಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ದೇಶಪಾಂಡೆ ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಭೂಮಿಯನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ರಾಜೀ ಸಂಧಾನದ ಮೂಲಕ ೪೦ ಜನ ಸಂತ್ರಸ್ತರಿಗೆ ಸ್ಥಳದಲ್ಲಿಯೇ ಪರಿಹಾರ ಧನದ ಚೆಕ್ ಒದಗಿಸುವ ಕಾರ್ಯ ಮಾಡಲಾಗಿದೆ. ಹುನಗುಂದ ನ್ಯಾಯಾಲಯದಲ್ಲಿಯೂ ಸಹ ಭೂಮಿ ಪರಿಹಾರಕ್ಕೆ ಸಂಬಂಧಿಸಿದ ಅತೀ ಹೆಚ್ಚು ೧೬.೫೭ ಲಕ್ಷ ರೂ.ಗಳ ಪರಿಹಾರದ ವಿತರಿಸುವ ಕಾರ್ಯ ಮಾಡಲಾಗಿದೆ ಎಂದರು.
ರಾಷ್ಟ್ರೀಯ ಲೋಕ ಅದಾಲತ್ ಶಿಬಿರದಲ್ಲಿ ಒಟ್ಟು ೧೧೦೭೪ ಪ್ರಕರಣಗಳ ಪೈಕಿ ೫೫೭೯ ಪ್ರಕರಣಗಳಿಗೆ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ. ಬಾಕಿ ಇರುವ ೫೫೩೨ ಮತ್ತು ೫೫೪೨ ವಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು ೧೧೦೭೪ ಪ್ರಕರಣಗಳನ್ನು ವಿಚಾರಣೆಗಾಗಿ ತೆಗೆದುಕೊಳ್ಳಲಾಗಿದ್ದು, ಈ ಪೈಕಿ ೫೫೭೯ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ರಾಜೀ ಸಂಧಾನ ಮಾಡಿಸಲಾಯಿತು. ಈ ಎಲ್ಲ ಪ್ರಕರಣಗಳಿಗೆ ಒಟ್ಟು ೨೧.೬೯ ಕೋಟಿ ರೂ.ಗಳಿಗೆ ರಾಜೀ ಮಾಡಿಸಲಾಗಿದೆ ಎಂದರು.
ಬಾಗಲಕೋಟೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಒಟ್ಟು ೧೭೫೧ ಪೈಕಿ ೩೦೬ ಪ್ರಕರಣಗಳು ಇತ್ಯರ್ಥವಾದರೆ, ಬೀಳಗಿ ಕೋರ್ಟನಲ್ಲಿ ೮೯೯ ಪ್ರಕರಣಗಳ ಪೈಕಿ ೩೭೫, ಮುಧೋಳ ಕೋರ್ಟನಲ್ಲಿ ೨೪೭ ಪ್ರಕರಣಗಳ ಪೈಕಿ ೯೬, ಬನಹಟ್ಟಿ ಕೋರ್ಟನಲ್ಲಿ ೮೯೯ ಪ್ರಕರಣಗಳ ಪೈಕಿ ೩೭೫, ಹುನಗುಂದ ಕೋರ್ಟನಲ್ಲಿ ೮೨೩ ಪೈಕಿ ೧೮೧, ಜಮಖಂಡಿ ಕೋರ್ಟನಲ್ಲಿ ೧೦೫೧ ಪ್ರಕರಣಗಳ ಪೈಕಿ ೧೬೮ ಹಾಗೂ ಬಾದಾಮಿ ಕೋರ್ಟನಲ್ಲಿ ೬೮೦ ಪ್ರಕರಣಗಳ ಪೈಕಿ ೨೩೧ ಪ್ರಕರಣಗಳನ್ನು ಇತ್ಯರ್ಥಗೊಂಡಿವೆ ಎಂದು ಹೇಳಿದರು.
ಅಲ್ಲದೆ ೫೫೪೨ ವಾಜ್ಯ ಪೂರ್ವ ಪ್ರಕರಣಗಳಲ್ಲಿ ಕ್ರಿಮಿನಲ್ ಕೌಂಪಂಡೆಬಲ್ ಪ್ರಕರಣ, ಬ್ಯಾಂಕ್ ರಿಕವರಿ, ಕಾರ್ಮಿಕರ ವಿವಾದ, ವೈವಾಹಿಕ ವಿವಾದ, ಭೂ ಪರಿವರ್ತನೆ, ಚೆಕ್ ಬೌಂನ್ಸ್, ಇತರೆ ನಾಗರಿಕ ಪ್ರಕರಣಗಳು ಹಾಗೂ ಪೆಟ್ಟಿ ಕೇಸ್‌ಗೆ ಸಂಬಂಧಿಸಿದ ಪ್ರಕರಣಗಳಿದ್ದವು. ಲೋಕ ಅದಾಲತ್ ಶಿಬಿರದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು ಪಾಲ್ಗೊಂಡಿದ್ದರು.
ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪುರ ಉಪಸ್ಥಿತರಿದ್ದರು.