ಹೋರಾಟಗಾರರನ್ನು ಸ್ಮರಿಸುವ ಸುದಿನ

15blrp3
Published on

ಬೇಲೂರು: ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಹಾಗೂ ಗೌರವಿಸುವ ಈ ದಿನ ಭಾರತೀಯರಾದ ಪಾಲಿಗೆ ಮಹತ್ತರವಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ತ್ಯಾಗ ಬಲಿದಾನದ ಮೂಲಕ ದೇಶವನ್ನು ಬ್ರಿಟಿಷರ ಸಂಕೋಲೆಯಿಂದ ಬಿಡಿಸಿದ ಮಹನೀಯರ ಹೋರಾಟವೇ ಇಂದಿನ ಆಚರಣೆಗೆ ಕಾರಣವಾಗಿದೆ. ಮೊದಲು ದೇಶ ನಂತರ ಉಳಿದದ್ದು. ಸ್ವಾತಂತ್ರ್ಯ ಸ್ವೇಚ್ಛಾಚಾರವಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಅಸಂಖ್ಯಾತ ಮಹನೀಯರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕಾಗಿದೆ. ಯಾವ ದೇಶದ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ ನಿರಂತರವಾಗಿ ಸಾಗುತ್ತದೆ. ಅದಕ್ಕೆ ಇಂದಿನ ಭವ್ಯ ಭಾರತವೇ ಸಾಕ್ಷಿ ಎಂದರು.

ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಭಾರತ ವಿಶ್ವದಾದ್ಯಂತ ಸದೃಢ ಪ್ರಜಾಪ್ರಭುತ್ವ ದೇಶವಾಗಿದೆ. ಇಂತಹ ಪ್ರಜಾಪ್ರಭುತ್ವವನ್ನು ದೇಶಕ್ಕೆ ನೀಡುವಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮವನ್ನು ಸ್ಮರಿಸಬೇಕು. ನಾವೆಲ್ಲರೂ ನಾನು ನನ್ನದು ಎಂಬುದನ್ನು ಬಿಟ್ಟು, ನಾವು ನಮ್ಮವರಾಗಿ ಬದುಕೋಣ ಎಂದರು.

ಪುರಸಭೆ ಅಧ್ಯಕ್ಷೆ ಉಷಾ, ಬೇಲೂರು-ಹಳೇಬೀಡು ಯೋಜನಾ ಪ್ರಾಧಿಕಾರದ ಅಧ್ಯಕ್ಷ ತೌಫಿಕ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿಗ್ಗಾವಿ, ಸದಸ್ಯರಾದ ತೀರ್ಥಕುಮಾರಿ, ಜಮಾಲೂದ್ದೀನ್, ಭರತ್, ಕೆಡಿಪಿ ಸದಸ್ಯರಾದ ಸೌಮ್ಯ, ಜ್ಯೋತಿ, ಪಿಐ ರೇವಣ್ಣ, ವೃತ್ತ ನಿರೀಕ್ಷಕ ಜಗದೀಶ್, ಶಿರಾಸ್ತೇದಾರ್ ತನ್ವಿರ್ ಅಹಮ್ಮದ್, ಕಂದಾಯ ನಿರೀಕ್ಷಕ ನಟರಾಜ್, ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳಿದ್ದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ, ಪೊಲೀಸ್, ಗೃಹರಕ್ಷಕ ದಳ ಮತ್ತು ವಿದ್ಯಾರ್ಥಿಗಳ ಪಥ ಸಂಚಲನ ಗಮನ ಸೆಳೆಯಿತು. ನಿವೃತ್ತ ಯೋಧರು, ಎಸ್‌ಎಸ್‌ಎಲ್‌ಸಿ, ಪಿಯುಸಿಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net