

ಬಾಗಲಕೋಟೆ: ಭಾರತ ದೇಶವು ವಿವಿಧ ಕ್ಷೇತ್ರದಲ್ಲಿ ಅಗಾಧವಾದ ಸಾಧನೆ ಮಾಡುತ್ತ ದಾಪುಗಾಲಿಡುತ್ತಿದೆ. ಅದಕ್ಕೆ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ, ಬಲಿದಾನ ಕಾರಣ ಎಂದು ವಿಜಯಪುರ-ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಅನಿತಾ ಹದ್ದನ್ನವರ ಹೇಳಿದರು.
ನವನಗರದ ಸೆಕ್ಟರ್ ೩೪ ರಲ್ಲಿನ ಜೀವೇಶ್ವರ ಗುಡಿ ಹತ್ತಿರ ವೈಷ್ಣೋದೇವಿ ಕ್ರಿಯೇಷನ್ ವತಿಯಿಂದ ಸ್ವಾತಂತ್ರ‍್ಯೋತ್ಸವ ನಿಮಿತ್ತ ಸೋಮವಾರರಂದು ಮಧ್ಯಾರಾತ್ರಿ ೧೨ ಗಂಟೆಗೆ ಏರ್ಪಡಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ದೇಶದ ಬೆಳವಣಿಗೆಗೆ ವಿಜ್ಞಾನ ತಂತ್ರಜ್ಞಾನ, ಶಿಕ್ಷಣ, ಅಂತರಿಕ್ಷೆಯಾನ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಯೋಗ ಹೀಗೆ ಹಲವಾರು ಕ್ಷೇತ್ರದಲ್ಲಿ ವಿಶ್ವವೇ ತಿರುಗಿ ಭಾರತದತ್ತ ನೋಡುವಂತೆ ಬೆಳೆವಣಿಗೆ ಹೊಂದಲಾಗಿದೆ. ಆದರೆ, ಸ್ವಾತಂತ್ರ‍್ಯ ಸಿಕ್ಕು ೭೭ ವರ್ಷಗಳಾದರೂ ಭಾರತ ದೇಶದಲ್ಲಿ ಭ್ರಷ್ಟಾಚಾರ, ನಿರುದ್ಯೋಗ, ಅತ್ಯಾಚಾರಕ್ಕೆ ಪೂರ್ಣವಾಗಿ ಕಡಿವಾಣ ಬೀಳುತ್ತಿಲ್ಲ. ಎಲ್ಲರು ಪ್ರಮಾಣಿಕತೆಗೆ ಮಹತ್ವ ನೀಡಿದರೇ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.
ಚಿತ್ರ ನಿರ್ಮಾಪಕ ಘನಶ್ಯಾಮ ಭಾಂಡಗೆ ಮಾತನಾಡಿ, ಪ್ರತಿ ವರ್ಷ ಸ್ವಾತಂತ್ರ‍್ಯದಿನವನ್ನು ನಾಡಿಗಾಗಿ ತ್ಯಾಗ ಮಾಡಿರುವ ಯೋಧರನ್ನು ಸ್ಮರಿಸುವ ದಿನವನ್ನಾಗಿ ಆಚರಿಸುತ್ತಿದ್ದೇವೆ. ಕಳೆದ ೩೦ ವರ್ಷಗಳಿಂದ ಮಧ್ಯರಾತ್ರಿಯಲ್ಲಿ ಧ್ವಜಾರೋಹಣ ನೆರವೇರಿಸಲಾಗುತ್ತಿದೆ ಎಂದು ಹೇಳಿದರು.
ಹಿರಿಯ ಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಗದಗ-ಡಂಬಳ ಜದ್ಗುರು ತೋಂಟದಾರ್ಯ ಸಂಸ್ಥಾಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಯರನಾಳದ ವಿರಕ್ತಮಠದ ಗುರುಸಂಗನ ಬಸವ ಸ್ವಾಮೀಜಿ, ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಿವೈಎಸ್ಪಿ ಪುಷ್ಪಲತಾ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಧವ ಸೇವಾ ಕೇಂದ್ರದ ಅಧ್ಯಕ್ಷ ನಾಗರಾಜ ಹದ್ಲಿ, ಕಿರುತೆರೆ ನಟರಾದ ಗಣೇಶರಾವ ಕೇಸರಕರ, ವೆಂಕಟೇಶ ಬಿ.ಎಂ, ನಟಿ ಸಾಕ್ಷಿ ಮೇಘನಾ, ಸಂತೋಷ ಐಹೊಳೆ, ಶ್ರೀನಿವಾಸ, ರಾಘವೇಂದ್ರ ಬಿಸನಾಳ, ಉಮೇಶ ಬರಗುಂಡಿ ಇದ್ದರು.