

ಬಾಗಲಕೋಟೆ ಸಚಿವ ಮುರುಗೇಶ ನಿರಾಣಿ ಹೇಗೆ ಮೇಲೆ ಬಂದಿದ್ದಾರೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಸಾಮಾನ್ಯ ಕುಟುಂಬದಿಂದ ಬಂದವರಲ್ಲ. ಮೀಸಲಾತಿ ಹೋರಾಟಕ್ಕೆ ಒಂದೇ ಒಂದು ರೂಪಾಯಿ ದೇಣಿಗೆ ಕೊಟ್ಟಿದ್ದರೆ ತೊಯ್ದ ಬಟ್ಟೆ ಮೇಲೆ ಕೂಡಲಸಂಗಮಕ್ಕೆ ಬಂದು ಸಂಗಮನಾಥನ ಮೇಲೆ ಆಣೆ ಮಾಡಲಿ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸವಾಲು ಹಾಕಿದರು.
ಸಚಿವ ಮುರುಗೇಶ ನಿರಾಣಿಗೆ ತಾಕತ್ತು ಇದ್ದರೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಆದೇಶ ಪತ್ರ ತಂದು ಕೊಡಲಿ. ಸುಮ್ಮನೆ ಕುಳಿತು ಮಾತನಾಡುವುದಲ್ಲ. ನೀವು ಹೇಗೆ ಹಣ ಮಾಡಿದ್ದೀರಿ ಎನ್ನುವುದು ಜಗತ್ತಿಗೆ ಗೊತ್ತಿದೆ. ಭ್ರಷ್ಟಾಚಾರ ಮೂಲಕ ದಬ್ಬಾಳಿಕೆ ಮಾಡಲು ಬಂದರೆ ಸಹಿಸುವುದಿಲ್ಲ. ಮಂತ್ರಿಗಿರಿಗಾಗಿ ಸ್ವಾಮೀಜಿಗಳನ್ನು ರಾತ್ರಿ ಕರೆದುಕೊಂಡು ಯಾರ ಕಾಲು ಹಿಡಿದಿದ್ದೀರಿ ಎನ್ನುವುದನ್ನು ಮರೆಯಬೇಡಿ ಎಂದು ನವನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ವಾಗ್ದಾಳಿ ನಡೆಸಿದರು.
ನಿಮಗೆ ನಾಚಿಕೆಯಾಗಬೇಕು, ಮುಳುಗಡೆ ಪರಿಹಾರ ಕೊಡಿಸಲಾಗದ ನೀವು ವಿಮಾನ ನಿಲ್ದಾಣಕ್ಕೆ ಬಡ ರೈತರ ಭೂಮಿ ಕಸಿದುಕೊಳ್ಳಲು ಹೊರಟಿರುವುದು ಅಪಮಾನಕರ ಸಂಗತಿಯಲ್ಲವೆ ? ಎಂದು ಪ್ರಶ್ನಿಸಿದರು. ರಸ್ತೆ, ಚರಂಡಿ, ಮೂಲ ಸೌಕರ್ಯಗಳಿಗೆ ಅನುದಾನ ತರದೆ ಸ್ವಾರ್ಥಕ್ಕಾಗಿ ವಿಮಾನ ನಿಲ್ದಾಣ ಮಾಡಲು ಹೊರಟಿರುವುದು ಜಗತ್ತಿಗೆ ತಿಳಿದಿರುವ ವಿಷಯ ಎಂದು ಟೀಕಿಸಿದರು.
ಮೂರನೇ ಮಹಡಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಕೂಡಿಸುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಮಾಜದ ಕಾರ್ಯಕ್ರಮದಲ್ಲಿ ಹಾಗೆ ಹೇಳಿರುವುದಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ತಿಳಿಸಿರುವೆ. ಯಾರಿಗೆ ತಾಕತ್ತು ಇದೆ ಅವರು ಮೂರನೇ ಮಹಡಿಯಲ್ಲಿ ಕುಳಿತುಕೊಳ್ಳುತ್ತಾರೆ. ನಿಮಗೆ ತಾಕತ್ತು ಇದ್ದರೆ ಮೀಸಲಾತಿ ಅಧಿಸೂಚನೆ ಹೊರಡಿಸಿ ಮೂರನೇ ಮಹಡಿಯಲ್ಲಿ ಕುಳಿತುಕೊಳ್ಳಿ ಎಂದು ಸಚಿವ ನಿರಾಣಿಗೆ ಪರೋಕ್ಷವಾಗಿ ಸವಾಲು ಹಾಕಿದರು.
ಹೋರಾಟಗಾರರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ:
ಸಮಾಜದ ಪರವಾಗಿ ಹೋರಾಟ ಮಾಡುವವರ ಕುರಿತು ಮಾತನಾಡುವ ನೈತಿಕತೆ ಸಚಿವ ನಿರಾಣಿ ಅವರಿಗೆ ಇಲ್ಲ. ಅವರ ನೆಲೆ ಅವರಿಗೆ ಕಾಣುತ್ತಿಲ್ಲ. ಈಗ ಬೀಳಗಿಯಲ್ಲಿ ಸೋಲಿನ ಭಯದಿಂದ ಜಮಖಂಡಿಯತ್ತ ಮುಖ ಮಾಡುತ್ತಿದ್ದಾರೆ. ಇದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಕಾಶಪ್ಪನವರ ಹೇಳಿದರು.
ಮಂತ್ರಿಗಿರಿಗಾಗಿ ಸಿಡಿ ಫ್ಯಾಕ್ಟರಿ: ಸಿಡಿ ಬಾಬಾರವರು ಮಂತ್ರಿ ಸ್ಥಾನ ಪಡೆಯಲು ಸಿಡಿ ಫ್ಯಾಕ್ಟರಿಯನ್ನೇ ಸೃಷ್ಟಿಸಿದ್ದಾರೆ. ಕಾಂಗ್ರೆಸ್, ಬಿಜೆಪಿಯವರ ಸಿಡಿ ಇಟ್ಟುಕೊಂಡು ಬ್ಲ್ಯಾಕ್‌ಮೇಲೆ ರಾಜಕಾರಣ ಮಾಡುತ್ತ ತಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತಿದ್ದಾರೆ. ಅರ‍್ಯಾರು ಎನ್ನುವುದು ನಾನು ಹೇಳುವುದಿಲ್ಲ, ಎಲ್ಲ ರಾಜಕಾರಣಿಗಳಿಗೆ ಹಾಗೂ ರಾಜ್ಯದ ಜನತೆಗೆ ಗೊತ್ತಿದೆ. ಸಿಡಿ ಬಾಬಾನ ಸಿಡಿಯೂ ಬಿಡುಗಡೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.