ಹೋಟೆಲ್ ಬುಕ್ಕಿಂಗ್ ಹಣ ವಂಚನೆ, ಯುವತಿ ಬಂಧನ

13gkn1-a2-abhinav-
Published on

ಗೋಕರ್ಣ: ಇಲ್ಲಿನ ಪ್ರಮುಖ ಹೋಟೆಲ್ ಒಂದಕ್ಕೆ ಸೇರಿದ ರೂಮ್ ಬುಕ್ಕಿಂಗ್ ಹಣವನ್ನು ವಂಚಿಸಿದ ಆರೋಪದ ಮೇಲೆ ಬೆಂಗಳೂರು ಕೋರಮಂಗಲದ ಫಾತಿಮಾ ರೊಮಾ ಸಯ್ಯದ್ ಎಂಬುವವಳನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತಳನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆ. 24ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಬ್ಬ ಮುಖ್ಯ ಆರೋಪಿ ಪ್ರಶಾಂತ ಅಭಿನವ್ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಕಳೆದ ಮಾರ್ಚ್​ನಲ್ಲಿ ಇಲ್ಲಿನ ಹೋಟೆಲ್ ಓಂ ಇಂಟರ್​ನ್ಯಾಶನಲ್ ಮಾಲೀಕ ನಾಗರಾಜ ಹಿತ್ತಲಮಕ್ಕಿ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹಿನ್ನೆಲೆ: ಬೆಂಗಳೂರಿನ ಲುಸಿಡಾ ಹಾಸ್ಪಿಟಾಲಿಟಿ ಲಿ. ಪರವಾಗಿ 2018 ಡಿಸೆಂಬರ್​ನಲ್ಲಿ ಈ ಇಬ್ಬರು ಆರೋಪಿಗಳು ಹೋಟೆಲ್ ಓಂ ಇಂಟರ್​ನ್ಯಾಶನಲ್​ಗೆ ಕಮಿಷನ್ ಮೇಲೆ ಆನ್​ಲೈನ್ ಮೂಲಕ ರೂಮ್ ಬುಕ್ಕಿಂಗ್ ಮಾಡಿಕೊಡುವ ವರ್ಷದ ಒಪ್ಪಂದ ಮಾಡಿಕೊಂಡಿದ್ದರು. ರೂಮ್ ಬುಕ್ಕಿಂಗ್ ಹಣವನ್ನು ತಮ್ಮ ಖಾತೆಗೆ ಪಡೆದುಕೊಳ್ಳುತ್ತಿದ್ದರು. ಕರಾರಿನಂತೆ ಮೊದಲ 8 ತಿಂಗಳ ಹಣವನ್ನು ಸರಿಯಾಗಿ ಸಂದಾಯಿಸಿದರು. ಆದರೆ, 2019 ಅಕ್ಟೋಬರ್ 2ನೇ ವಾರದಿಂದ ಫೆಬ್ರವರಿ 2020 ರವರೆಗೆ ಬುಕ್ಕಿಂಗ್ ಮುಂದುವರೆಸಿ ಹಣವನ್ನು ಮಾತ್ರ ಹಾಗೆ ಇಟ್ಟುಕೊಂಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಈ ರೀತಿ ತಮಗೆ ಬರಬೇಕಾಗಿದ್ದ 18 ಲಕ್ಷ ರೂ.ಗೂ ಅಧಿಕ ಬುಕ್ಕಿಂಗ್ ಹಣದ ಬಗ್ಗೆ ಹೋಟೆಲ್​ನವರು ಹಲವು ಬಾರಿ ಆರೋಪಿಗಳನ್ನು ಸಂರ್ಪಸಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಸ್ಥಳೀಯ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಸ್ಥಳೀಯ ಪೊಲೀಸರು ಅನೇಕ ಬಾರಿ ಇವರ ಹುಡುಕಾಟಕ್ಕೆ ಬೆಂಗಳೂರಿಗೆ ತೆರಳಿದ್ದರು ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಅಂತಿಮವಾಗಿ ಬೆಂಗಳೂರು ಪೊಲೀಸರ ಸಹಾಯದಿಂದ ಓರ್ವ ಆರೋಪಿಯನ್ನು ಸ್ಥಳೀಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net