

ಹಿರೀಸಾವೆ: ಹೋಬಳಿಯ ಪಿ.ಹೊಸಹಳ್ಳಿ ಗ್ರಾಮದಲ್ಲಿ ಕರಿಗಲ್ಲು ಪೂಜೆ (ಬ್ರಹ್ಮದೇವರ ಪೂಜೆ) ಹಾಗೂ ಕಾರಹಬ್ಬದ ಉತ್ಸವವು ಸೋಮವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ಜಾನುವಾರು ಹಾಗೂ ನೇಗಿಲು-ಮುಟ್ಟುಗಳಿಗೆ ಪೂಜೆ ಸಲ್ಲಿಸುವ ಪುರಾತನ ಹಬ್ಬ ಇದಾಗಿದೆ. ಕರಿಗಲ್ಲಿಗೆ ವಿಶೇಷ ಪೂಜೆ ಸಲ್ಲಿಸಿ ಹಬ್ಬ ಆಚರಿಸುವುದರಿಂದ ಕೃಷಿಯಲ್ಲಿ ಅಭಿವೃದ್ಧಿ, ಫಸಲಿನಲ್ಲಿ ಹೆಚ್ಚಿನ ಇಳುವರಿ ಹಾಗೂ ಲಾಭ, ಜಾನುವಾರುಗಳಿಗೆ ಆರೋಗ್ಯ ಹಾಗೂ ಆಯಸ್ಸು ಲಭಿಸುತ್ತದೆ ಎಂಬುದು ಜನತೆಯ ಬಲವಾದ ನಂಬಿಕೆಯಾಗಿದೆ.
ಜತೆಗೆ ವರ್ಷದಲ್ಲಿ ಒಂದು ದಿನ ಅದೂ ಕಾರಹಬ್ಬದಂದು ಮಾತ್ರ ಬ್ರಹ್ಮದೇವನಿಗೆ (ಕರಿಕಲ್ಲಿಗೆ) ಇಲ್ಲಿ ವಿಶೇಷವಾದ ಪೂಜೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಜಾನುವಾರುಗಳ ಮೈ ತೊಳೆದು, ಕೊಂಬುಗಳಿಗೆ ವಿವಿಧ ಬಗೆಯ ಬಣ್ಣ ಹಚ್ಚಿ ಬಲೂನ್ ಮತ್ತು ಸುನ್ನಾರಿಯಿಂದ ಸಿಂಗರಿಸಲಾಗಿತ್ತು. ಕುತ್ತಿಗೆಗೆ ಗೆಜ್ಜೆಹಾರ ಹಾಗೂ ಕಾಲಿಗೆ ಕರಿದಾರ ಕಟ್ಟಲಾಗಿತ್ತು. ಜಾನುವಾರುಗಳ ಮೈಮೇಲೆ ಅವುಗಳು ಬಾಳುವ ಬೆಲೆಯನ್ನು ಸಹ ಕೆಲವರು ಬಣ್ಣದಿಂದ ಬರೆದಿದ್ದು ವಿಶೇಷ.
ಜಾನುವಾರುಗಳ ಪಾದಪೂಜೆ: ಸಂಜೆ ಶೃಂಗಾರಗೊಂಡ ಓರಿಗಳನ್ನು ಮನೆಯ ಬಾಗಿಲಲ್ಲಿ ನಿಲ್ಲಿಸಿ ಮುಖ ತೊಳೆದು ಹಣೆಗೆ ಕುಂಕುಮವಿಟ್ಟು ಹೂವು ಮುಡಿಸಲಾಯಿತು. ಹೋರಿಗೆ ಪೂಜೆ ಮಾಡಿದ ಮುತೈದೆಯರು ತಮ್ಮ ಮಾಂಗಲ್ಯವನ್ನು ಓರಿಗಳ ಪಾದಕ್ಕೆ ಸ್ಪರ್ಶಿಸಿ ಮಾಂಗಲ್ಯ ಭಾಗ್ಯ ಗಟ್ಟಿಗೊಳಿಸುವಂತೆ ಬೇಡಿಕೊಳ್ಳುವುದದರ ಜತೆಗೆ ಉತ್ತಮ ಮಳೆ ಸುರಿದು ದವಸ ಧಾನ್ಯ ಹೆಚ್ಚಲೆಂದು ಬೇಡಿಕೊಳ್ಳುವುದು ಹಬ್ಬದ ವಿಶೆಷ ಎಂದು ಗ್ರಾಮದ ಹಿರಿಕರು ಹೇಳುತ್ತಾರೆ.
ಸಂಜೆ 6.30 ರ ಸುಮಾರಿನಲ್ಲಿ ರೈತರು ತಮ್ಮ ಜಾನುವಾರುಗಳೊಂದಿಗೆ ಕರಿಗಲ್ಲು ಇರುವಲ್ಲಿ ಹೆಬ್ಬಾಗಿಲು ಬಳಿ ಒಟ್ಟಾಗಿ ಸೇರಿದರು. ಕರಿಗಲ್ಲಿಗೆ ವಿಶೇಷ ಪೂಜೆ ಹಾಗೂ ನೈವೇದ್ಯ ಕಾರ್ಯಕ್ರಮ ಜರುಗಿತು. ನಂತರ ಜಾನುವಾರುಗಳಿಗೆ ತೀರ್ಥ ಪ್ರೋಕ್ಷಣೆ ಮಾಡಲಾಯಿತು.
ವಾಡಿಕೆಯಂತೆ ಹೋರಿಗಳನ್ನು ಓಡಿಸಿಕೊಂಡು ಯುವಕರು ಊರನ್ನು ಒಂದು ಸುತ್ತು ಬಳಸಿ ಬಂದರು. ಅವರಲ್ಲಿ ಮೊದಲು ಬಂದ ಯುವಕ ಗ್ರಾಮದ ಹೆಬ್ಬಾಗಿಲಿಗೆ ಕಟ್ಟಿರುವ ದಂಡೆಯನ್ನು (ತೋರಣ) ಕೀಳುವ ಮೂಲಕ ಕಾರಹಬ್ಬಕ್ಕೆ ತೆರೆ ಬಿದ್ದಿತು.
ಕ್ಷೀಣಿಸುತ್ತಿರುವ ಜಾನುವಾರುಗಳು: ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆಯ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂತತಿ ಕ್ಷೀಣಿಸುತ್ತಿದೆ. ಪರಿಣಾಮ ಹಳ್ಳಿಯ ಸೊಗಡು ಹಾಗೂ ಪುರಾತನ ಕಾರಹಬ್ಬವು ದಿನ ಕಳೆದಂತೆ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ.