ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ

bkt-5-4
ಬಾಗಲಕೋಟೆ ನಗರದಲ್ಲಿ ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರ ಸಂಘದ ಜಿಲ್ಲಾ, ರಾಜ್ಯ ಘಟಕದ ನೇತೃತ್ವದಲ್ಲಿ ಎನ್‌ಪಿಎಸ್ ಸರ್ಕಾರಿ ನೌಕರರಿಂದ ಬೃಹತ್ ಪ್ರತಿಭಟನೆ ನಡೆಯಿತು
Published on

ಬಾಗಲಕೋಟೆ: ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ ಹಳೇ ಪಿಂಚಣಿ ಮಾರು ಜಾರಿಗೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರ ಸಂಘದ ಜಿಲ್ಲಾ, ರಾಜ್ಯ ಘಟಕದ ನೇತೃತ್ವದಲ್ಲಿ ಸರ್ಕಾರಿ ನೌಕರರಿಂದ ಒಪಿಎಸ್ ಸಂಕಲ್ಪ ಯಾತ್ರೆ ನಗರದಲ್ಲಿ ಶನಿವಾರ ಜರುಗಿತು.
ನವನಗರದ ಅಂಬೇಡ್ಕರ್ ಭವನದಿಂದ ಆರಂಭವಾದ ಪ್ರತಿಭಟನಾ ರ‍್ಯಾಲಿ(ಯಾತ್ರೆ) ಪ್ರಮುಖ ಬೀದಿಗಳಲ್ಲಿ ಸಾರಿ ಜಿಲ್ಲಾಡಳಿತ ಭವನ ತಲುಪಿ ಪ್ರತಿಭಟನಾ ಸಭೆಯಾಗಿ ಮಾರ್ಪಟಿತ್ತು. ನಂತರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ಮಾತನಾಡಿ, ಅಭದ್ರತೆಯಲ್ಲಿ ಎನ್‌ಪಿಎಸ್ ನೌಕರರು ಜೀವನ ಕಳೆಯುತ್ತಿದ್ದಾರೆ. ನಿವೃತ್ತಿ ಹೊಂದಿದ ಬಳಿಕ ಅವರಿಗೆ ಯಾವ ಸೌಲಭ್ಯ ದೊರೆಯುದಿಲ್ಲ. ಎನ್‌ಪಿಎಸ್ ಮಾಡು ಇಲ್ಲವೇ ಮಡಿ ಹೋರಾಟ ಆರಂಭಿಸಲಾಗಿದೆ. ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ನೀಡುವ ಅನುದಾಣ ನಮಗೂ ನೀಡಬೇಕು. ಈಗಾಗಲೇ ಜಾರ್ಖಂಡ್, ಛತ್ತಿಘಡ, ಪಶ್ಚಿಮ ಬಂಗಾಳ, ಪಂಜಾಬನಲ್ಲಿ ಎನ್‌ಪಿಎಸ್ ರದ್ದುಗೊಳಿಸಿ ಹಳೇ ಪಿಂಚಿಣಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ದೇಶದಲ್ಲಿ ಒಂದೇ ಸಂವಿಧಾನ ವಿದ್ದರು ಕರ್ನಾಟಕದಲ್ಲಿ ಮಾತ್ರ ಜಾರಿಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್‌ಪಿಎಸ್ ನೌಕರರ ಈ ಬಗ್ಗೆ ಜಾಗೃತಗೊಳ್ಳಬೇಕು. ಇಲ್ಲವಾದಲ್ಲಿ ಭವಿಷ್ಯದ ಬದುಕು ದುರ್ಬಲಗೊಳ್ಳಲಿದೆ. ಹೀಗಾಗಿ ಸಂಘಟನೆ ಮೂಲಕ ಹೋರಾಟ ಕೈಗೊಳ್ಳಲಾಗಿದೆ. ರಾಜ್ಯವ್ಯಾಪಿ ಉತ್ತಮ ಸ್ಪಂದನೆ ಸಿಕ್ಕಿದೆ. ಸರ್ಕಾರ ತಾಯಿ ಇದ್ದಂತೆ ಕೂಸು ಅತ್ತರೇ ಮಾತ್ರ ಹಾಲು ಕುಡಿಸುತ್ತದೆ. ಇಲ್ಲವಾದಲ್ಲಿ ಹಾಲು ಯಾರು ಕೊಡುವದಿಲ್ಲ. ಇದನ್ನು ಅರಿತು ನೌಕರರು ಪ್ರತಿಭಟನೆ, ಹೋರಾಟದಲ್ಲಿ ಭಾಗಿಯಾಗಬೇಕು. ಡಿ.೧೯ ರಂದು ಬೆಂಗಳೂರಿನಲ್ಲಿ ನಡೆಯುವ ಹೋರಾಟದಲ್ಲಿ ಎಲ್ಲ ನೌಕರರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ರಾಜ್ಯಾ ಉಪಾಧ್ಯಕ್ಷ ಸಿದ್ದಪ್ಪ ಸಂಗಪ್ಪನವರ, ಪ್ರಧಾನ ಕಾರ್ಯದರ್ಶಿ ನಾಗನಗೌಡ ಎಂ.ವಿ., ಮುಖಂಡರಾದ ಎಚ್.ಜಿ.ತಿಪ್ಪರೆಡ್ಡಿ, ಮಂಜುನಾಥ ಕಣಬೂರ, ವಿಶ್ವನಾಥ ಕೋಟಿ, ಅರವಿಂದ ಅಣ್ಣಿಗೇರಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net