

ಕಾರವಾರ: ಸಾವು, ಸಾವಿನ ಭಯ…ಆರ್ಥಿಕ ಸಂಕಷ್ಟ, ಅವಮಾನದಿಂದ ಸಂಘರ್ಷ.. ಅಬ್ಬಾ ‘2020’ ಎಂಬ ವರ್ಷ ಭೀಕರವಾಗಿ ಕಾಡಿಬಿಟ್ಟಿತು. ‘ದೇವರೆ ಮತ್ತೆ ಬರದಿರಲಿ ಇಂಥ ವರ್ಷ’ ಎಂದು ಜನ ಪರಿ ಪರಿಯಾಗಿ ಬೇಡಿಕೊಳ್ಳುವಂತೆ ಮಾಡಿದೆ.
ಇವೆಲ್ಲದರ ನಡುವೆಯೂ ಈ ವರ್ಷದ ವಿದ್ಯಮಾನಗಳು ಮಾನವನ ಮುಖವಾಡವನ್ನು ಕಳಚಿ, ಅಸಲಿ ಅಸ್ತಿತ್ವವನ್ನು ತೋರಿಸುವಂತೆ ಮಾಡಿದ್ದಂತೂ ಹೌದು. ಶ್ರೀಮಂತಿಕೆಯ ದರ್ಪ,ಅಧಿಕಾರದ ಅಮಲು ಯಾವುದೂ ಶಾಶ್ವತವಲ್ಲ ಎಂಬುದನ್ನು ಸ್ವಷ್ಟವಾಗಿ ತಿಳಿಸಿಕೊಟ್ಟಿದೆ. ಹಳ್ಳಿ ಜೀವನದ ಮಹತ್ವ ಎತ್ತಿ ಹಿಡಿದಿದೆ ಎಂಬುದೂ ಸತ್ಯ.
ದುರಂತಗಳಿಂದಲೇ ತುಂಬಿದ ಕ್ಯಾಲೆಂಡರ್ ಬದಲಿಸುವ ಕಾಲ ಬಂದುಬಿಟ್ಟಿದೆ. ಈ ವರ್ಷದ ನೋವುಗಳನ್ನು ನೆನಪಿನ ಪೆಟ್ಟಿಗೆಯಲ್ಲಿಟ್ಟು ಹೊಸ ಯೋಚನೆ, ಯೋಜನೆ, ಸಕಾರಾತ್ಮಕ ಚಿಂತನೆಗಳ ಮೂಲಕ ನಾವು ಹೊಸ ವರ್ಷವನ್ನು ಸ್ವಾಗತಿಸಲೇಬೇಕಿದೆ. ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಏನೆ ಕಷ್ಟ, ನಷ್ಟವಿದ್ದರೂ ಮರೆತು ಮುನ್ನುಗ್ಗಿದರೇ ಭರವಸೆಯ ಬೆಳಕು ಕಾಣಹುದಾಗಿದೆ. ‘ವಿಜಯವಾಣಿ’ ಕಳೆದ ಎರಡು ದಿನದಿಂದ 2020ರ ಹಿನ್ನೋಟ ಪ್ರಕಟಿಸಿತ್ತು. ಹಳೆಯ ವರ್ಷದ ಕಹಿ ಅನುಭವವನ್ನಾಧರಿಸಿ ಹೊಸ ವರ್ಷ ಹೀಗಿರಲಿ ಎಂಬ ಆಶಗಳ ರೂಪುರೇಷೆ ಇಲ್ಲಿದೆ. ಈ ಯೋಜನೆಯಂತೆಯೇ ನಡೆಯಬೇಕು ಎನ್ನುವಂತಿಲ್ಲ. ನಡೆಯುತ್ತದೆ ಎನ್ನುವ ಹಾಗೂ ಇಲ್ಲ. ಆದರೂ ಒಳ್ಳೆಯದೇ ಆಗಲಿ ಎಂಬ ಸದಾಶಯ ಇಲ್ಲಿದೆಯಷ್ಟೆ.