

ಯಲ್ಲಾಪುರ: ರಂಗಾಯಣದಂತಹ ಸಂಘಟನೆ ಎಲ್ಲೆಡೆ ಹೊಸ ಚಿಂತನೆಯ ಸನ್ನಿವೇಶಗಳ ಕುರಿತು ಬೆಳಕು ಚೆಲ್ಲುವಲ್ಲಿ ಮುಂದಾಗಿರುವುದು ಸಂತಸದ ವಿಷಯವಾಗಿದೆ ಎಂದು ತಹಸೀಲ್ದಾರ್ ಡಿ.ಜಿ. ಹೆಗಡೆ ಹೇಳಿದರು.
ಪಟ್ಟಣದ ಗಾಂಧಿ ಕುಟೀರದಲ್ಲಿ ಅಡಕೆ ವ್ಯಾಪಾರಸ್ಥರ ಸಂಘ ಮತ್ತು ರಂಗ ಸಹ್ಯಾದ್ರಿ ಯಲ್ಲಾಪುರ ಆಶ್ರಯದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಮೈಸೂರಿನ ರಂಗಾಯಣ ಸಂಚಾರಿ ರಂಗ ಘಟಕದ ನಾಟಕೋತ್ಸವವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ರಂಗಕರ್ವಿು ಆರ್.ಎನ್. ಭಟ್ಟ ಧುಂಡಿ ಮಾತನಾಡಿ, ಯಲ್ಲಾಪುರದ ನೆಲ ಯಕ್ಷಗಾನದ ಶ್ರೀಮಂತಿಕೆಯ ಸಾಂಸ್ಕೃತಿಕ ಗಟ್ಟಿತನ ಹೊಂದಿದ್ದು, ನಾಟಕ ಸಾಹಿತ್ಯಕ್ಕೂ ಪ್ರಾಧಾನ್ಯತೆ ನೀಡಿದೆ. ಸಾಂಸ್ಕೃತಿಕ ಕ್ಷೇತ್ರದ ಶ್ರೇಷ್ಠತೆಯನ್ನು ಉಳಿಸಿ-ಬೆಳೆಸಿಕೊಂಡು ಬರುತ್ತಿದೆ ಎಂದರು. ರಂಗಾಯಣದ ಸಂಚಾರಿ ಘಟಕ ವ್ಯವಸ್ಥಾಪಕ ಯೋಗಾನಂದ ಅರಸೀಕೆರೆ, ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಹಿರಿಯ ಸಹಕಾರಿ ಆರ್.ಎನ್. ಹೆಗಡೆ ಗೋರ್ಸಗದ್ದೆ ಮಾತನಾಡಿದರು. ಪತ್ರಕರ್ತ ಶಂಕರ ಭಟ್ಟ ತಾರೀಮಕ್ಕಿ, ರಂಗಸಹ್ಯಾದ್ರಿ ಅಧ್ಯಕ್ಷ ಡಿ.ಎನ್. ಗಾಂವ್ಕರ್, ಸಂಘಟಕ ನಾರಾಯಣ ಭಟ್ಟ ಉಪಸ್ಥಿತರಿದ್ದರು. ಅಡಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಸಂಘಟಕ ಲೋಕನಾಥ ಗಾಂವ್ಕರ್ ನಿರ್ವಹಿಸಿದರು.
ಎಸ್. ರಾಮನಾಥ ರಚನೆಯ, ಚಂದ್ರಹಾಸನ್ ನಿರ್ದೇಶನದಲ್ಲಿ ಪ್ರದರ್ಶನಗೊಂಡ ‘ಆರ್ಕಿಡಿಯಾದಲ್ಲಿ ಪಕ್’ ನಾಟಕ ಪ್ರೇಕ್ಷಕರನ್ನು ರಂಜಿಸಿತು. ಹಳೆಯ ಕಾಲದಲ್ಲಿ ಆರ್ಕಿಡಿಯಾ ನಾಡಿನ ಪ್ರೀತಿ, ಪ್ರೇಮ, ಮೋಹ, ಸೇಡು, ರಾಜಕಾರಣಗಳ ಹೂರಣವುಳ್ಳ ರಾಜಮನೆತನದ ಕಥೆ ಇದಾಗಿದ್ದು, ಯುರೋಪಿನ ಕಥೆಯನ್ನು ಭಾರತೀಯ ಸಾಂಪ್ರದಾಯಿಕ ನಿರೂಪಣೆಯಲ್ಲಿ ಹೆಣೆಯಲಾಗಿದೆ. ಸಮಕಾಲೀನ ಅಭಿರುಚಿಯ ಸಂಗೀತ, ನೃತ್ಯ ಸಂಯೋಜನೆ, ಆಕರ್ಷಕ ಪರಿಕರಗಳ ಜತೆಗೆ ಕಲಾವಿದರ ಅಭಿನಯ ನಾಟಕದ ಮೆರುಗು ಹೆಚ್ಚಿಸಿತು.