

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಸಮೀಪದ ಹೊರಮನೆಯಲ್ಲಿ ರೈತರು ಸಾಕಿದ ಜೇನು ನೊಣಗಳು ಮೃತಪಟ್ಟ ಸ್ಥಳಕ್ಕೆ ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಕೀಟ ತಜ್ಞೆ ರೂಪಾ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.
ಘಟನೆ ಕುರಿತಂತೆ ರೈತರಿಂದ ಮಾಹಿತಿ ಪಡೆದ ಅವರು, ಕೃಷಿಕ ನಾರಾಯಣ ಭಟ್ಟ ಅವರ ಜೇನು ಪೆಟ್ಟಿಗೆಗಳನ್ನು ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಅಡಕೆಯ ಮುಗುಡು ಉದುರುವುದನ್ನು ತಡೆಗಟ್ಟಲು ಹಾಗೂ ರಸ ಹೀರುವ ಕೀಟಗಳ ನಾಶಪಡಿಸಲು ಪಕ್ಕದ ತೋಟದ ಮಾಲೀಕರು ರಾಸಾಯನಿಕ ಸಿಂಪಡಿಸಿರುವುದೇ ಜೇನು ಹುಳುಗಳು ಸಾವಿಗೆ ಕಾರಣವಾಗಿದೆ. ಹೊರ ದೇಶಗಳಲ್ಲಿ ಇಂತಹ ರಾಸಾಯನಿಕಗಳ ಬಳಕೆ ನಿಷೇಧವಿದೆ. ಆದರೆ, ನಮ್ಮಲ್ಲಿ ಬಳಸಬಹುದಾಗಿದ್ದು, ರೈತರು ತೋಟಕ್ಕೆ ಬಳಸುವ ಮುನ್ನ ಗಂಭೀರವಾಗಿ ಯೋಚಿಸಬೇಕು. ಕೆಲವೊಮ್ಮೆ ಬಳಸುವುದು ಅನಿವಾರ್ಯವಾದರೂ ಜೇನಿನಂತಹ ಕೀಟಗಳಿಗೆ ತೊಂದರೆ ಆಗದ ಹಾಗೆ ಮಧ್ಯಾಹ್ನದ ನಂತರ ಬಳಸಬೇಕು. ಬಳಸುವ ಮೊದಲು ಅಕ್ಕಪಕ್ಕದ ಜೇನು ಸಾಕಿದವರಿಗೂ ವಿಷಯ ತಿಳಿಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಒಳಿತು ಎಂದರು.
ಜೇನು ಹುಳ ಸಾವಿಗೆ ಸಂಬಂಧಿಸಿದಂತೆ ಯಲ್ಲಾಪುರದ ತೋಟಗಾರಿಕೆ ಅಧಿಕಾರಿ ಹೀನಾ, ಅಪ್ಪಿಕೋ ಚಳವಳಿಯ ನೇತಾರ ಪಾಂಡುರಂಗ ಹೆಗಡೆ, ಆರ್.ಪಿ. ಹೆಗಡೆ ಗೋರ್ನಮನೆ, ಜೇನು ಕೃಷಿಕರಾದ ಶ್ರೀಪಾದಣ್ಣ ಕನೇನಹಳ್ಳಿ, ಅನಂತ ಸಿದ್ದಿ ಕೋಟೆಮನೆ ಇತರರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.