ಹೊರಟ್ಟಿ ಸಮಿತಿ ವರದಿ ಅನುಷ್ಠಾನಗೊಳಿಸಿ

IMG20220928115909
ಪ್ರೊ.ವಿಶ್ವನಾಥ ವಂಶಾಕೃತಮಠ, ಪ್ರೊ.ಮಹೇಂದ್ರ ಬಡಿಗೇರ
Published on

ಬಾಗಲಕೋಟೆ: ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಯ ಪಿಂಚಣಿ ನಿಗದಿ ಮಾಡಲು ಸೇವೆಗೆ ಸೇರಿದ ದಿನಾಂಕದಿಂದ ಸೇವೆ ಪರಿಗಣಿಸಬೇಕು ಎಂದು ನಿವೃತ್ತ ಪ್ರೊ.ವಿಶ್ವನಾಥ ವಂಶಾಕೃತಮಠ, ಪ್ರೊ.ಮಹೇಂದ್ರ ಬಡಿಗೇರ ಆಗ್ರಹಿಸಿದರು.
ಈಗ ಸಂಸ್ಥೆ ಅನುದಾನಕ್ಕೆ ಒಳಗಾದ ದಿನದಿಂದ ಸೇವೆ ಪರಿಗಣಿಸಲಾಗುತ್ತಿದೆ. ಇದರಿಂದ 30 ವರ್ಷಗಳ ಕಾಲ ಸೇವೆ ಸಲ್ಲಿಸಿದವರಿಗೆ ಪಿಂಚಣಿ ಇಲ್ಲದಂತಾಗಿದೆ. ಇದರಿಂದ ಆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಸಂಸ್ಥೆ ಅನುದಾನಕ್ಕೆ ಒಳಪಡುವ ಮುಂಚಿನ ಸೇವೆಯ ಅರಿಯರ್ಸ ಕೇಳುವುದಿಲ್ಲ. ಪಿಂಚಣಿಗೆ ಸೇವೆ ಪರಿಗಣಿಸಲು ಮಾತ್ರ ಆಗ್ರಹಿಸುತ್ತಿದ್ದೇವೆ. ಇದರಿಂದ ನಿವೃತ್ತರಾದ ಹಾಗೂ ನಿವೃತ್ತರಾಗಲಿರುವ ಸಾವಿರಾರು ಸಿಬ್ಬಂದಿಗೆ ಅನುಕೂಲವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಲ್ಪನಿಕ ವೇತನ ನಿಗದಿ ಮಾಡಬೇಕು. ಪಿಂಚಣಿಗೆ ಅನುದಾನಕ್ಕಿಂತ ಮುಂಚಿನ ಸೇವೆ ಪರಿಗಣಿಸಬೇಕು ಎಂದು ನ್ಯಾಯಾಲಯ ಆದೇಶಿಸಿದ್ದರೂ, ಸರ್ಕಾರ ಸ್ಪಂದಿಸುತ್ತಿಲ್ಲ. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ಸಮಿತಿ ವರದಿ ನೀಡಿದ್ದು, ಅದನ್ನು ಜಾರಿಗೊಳಿಸಬೇಕು. ಅನುದಾನಕಿಂತ ಮೊದಲಿನ ಸೇವೆ ಪರಿಗಣಿಸಿದರೆ 12,000 ಕೋಟಿ ರೂ.ಕೊಡಬೇಕಾಗುತ್ತದೆ ಎಂದು ಅಧಿಕಾರಿಗಳು ವರದಿ ನೀಡಿದ್ದರು. ಆದರೆ, ಹೊರಟ್ಟಿ ಅವರ ವರದಿಯಲ್ಲಿ 350 ಕೋಟಿ ರೂ.ಮಾತ್ರ ಬೇಕಾಗುತ್ತದೆ ಎಂದು ತಿಳಿಸಲಾಗಿದೆ ಎಂದು ವಿವರಿಸಿದರು.
ಇಂತಹದೇ ಪ್ರಕರವೊಂದರಲ್ಲಿ ಸುಪ್ರೀಂ ಕೋರ್ಟ್, ನೇಮಕಾತಿ ದಿನದಿಂದಲೇ ಪಿಂಚಣಿಗೆ ಪರಿಗಣಿಸಬೇಕು ಎಂದು ಆದೇಶಿಸಿದೆ. ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಅನುಷ್ಠಾನಗೊಂಡಿದೆ.ರಾಜ್ಯದಲ್ಲಿಯೂ ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಈ ಬಗ್ಗೆ ಹೋರಾಟ ನಡೆಸಲು ಅ.1 ರಂದು ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net