

ಬಾಗಲಕೋಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದಿಂದ ಶುಕ್ರವಾರ ನವನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನ ಎದುರು ಆಗಮಿಸಿದ ನೌಕರರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಽಕಾರಿ ಜಾನಕಿ ಕೆ.ಎಂ ಮೂಲಕ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಕಳೆದ ೧೫-೨೦ ವರ್ಷಗಳಿಂದ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರಿಗೆ ಸೇವಾ ಭದ್ರತೆ ಇಲ್ಲ. ನಿರಂತರವಾಗಿ ಕೆಲಸ ಮಾಡುತ್ತ ಬಂದರೂ ಗುತ್ತಿಗೆದಾರರು, ವಾರ್ಡನ್‌ಗಳು ತಾಲೂಕಾ ಹಾಗೂ ಜಿಲ್ಲಾ ಮಟ್ಟದ ಅಽಕಾರಿಗಳು ನಿರಂತರವಾಗಿ ಶೋಷಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲ ವಿಷಯಗಳ ಬಗ್ಗೆ ಗಮನಸೆಳೆಯಲು ಬೆಂಗಳೂರಿನ ವಸಂತನಗರದಲ್ಲಿ ಸೆ.೩ರಂದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಹೊರಗುತ್ತಿಗೆ ನೌಕರರನ್ನು ಪೊಲೀಸರು ಎಳೆದಾಡಿ, ಬಂಧಿಸಿದ್ದರು. ನಮ್ಮ ಮೇಲೆ ನಿರಂತರವಾಗಿ ಕಿರುಕುಳ ನಡೆಯುತ್ತಿದೆ ಎಂದು ದೂರಿದರು.
ಸಂಘಟನೆ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರು ಮಾತನಾಡಿ, ಹೊರಗುತ್ತಿಗೆ ನೌಕರರಿಗೆ ಇಲಾಖೆಯಿಂದ ನೇರವಾಗಿ ವೇತನ ಪಾವತಿಸಬೇಕು, ನಿವೃತ್ತಿವರೆಗೆ ಸೇವಾ ಭದ್ರತೆ ಕೊಡಬೇಕು, ೧೦ ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿರುವ ನೌಕರರನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮಕ್ಕೆ ಒಳಪಡಿಸಬೇಕು. ಕನಿಷ್ಠ ಮಾಸಿಕ ವೇತನವಾಗಿ ೩೧ ಸಾವಿರ ರೂ.ಗಳನ್ನು ನೀಡುವುದು ಸೇರಿ ೨೧ ಬೇಡಿಕೆಗಳನ್ನು ಇಲಾಖೆ ಮುಂದೆ ಇರಿಸಲಾಗಿದ್ದು, ನ್ಯಾಯಯುತ ಬೇಡಿಕೆಗಳು ಈಡೇರಿಸುವವರೆಗೆ ನಿರಂತರವಾಗಿ ಹೋರಾಟ ಮುಂದವರಿಯಲಿದೆ ಎಂದು ಹೇಳಿದರು.
ಜಂಟಿ ಕಾರ್ಯದರ್ಶಿ ಹುಲಿಗೆಪ್ಪ ಚಲವಾದಿ, ಜಿಲ್ಲಾಧ್ಯಕ್ಷ ರಾಜೇಶ ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ಆನಂದ ಹಾದಮನಿ, ರಾಜು ಮಾದರ, ಸುರೇಶ ಬಿಸನಾಳ, ಜುಬೇದ ನದಾಫ್, ಚೇತನ ಕೋಲ್ಕಾರ ಮತ್ತಿತರರು ನೇತೃತ್ವ ವಹಿಸಿದ್ದರು.