

ಕಾರವಾರ : ಜಿಲ್ಲೆಯಲ್ಲಿ ಶನಿವಾರದವರೆಗೆ 84,388 ಜನರಿಗೆ ಕರೊನಾ ಪರೀಕ್ಷೆ ಮಾಡಲಾಗಿದ್ದು, 8,217 ಜನರಿಗೆ ಕರೊನಾ ಇರುವುದು ಖಚಿತವಾಗಿದೆ. ಇನ್ನೂ 76 ಸಾವಿರ ಜನರ ವರದಿ ನೆಗೆಟಿವ್ ಬಂದಿದೆ.
ಫ್ಯೂಮಿಗೇಶನ್ ಮಾಡುವ ಉದ್ದೇಶದಿಂದ ಕ್ರಿಮ್ಸ್ನ ವೈರಾಲಜಿ ಆರ್ಟಿ-ಪಿಸಿಆರ್ ಪ್ರಯೋಗಾಲಯವನ್ನು ಸೆ. 21 ಹಾಗೂ 22 ರಂದು ತಾತ್ಕಾಲಿಕವಾಗಿ ಬಂದ್ ಮಾಡಲಾಗುವುದು ಎಂದು ಕ್ರಿಮ್್ಸ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಸದ್ಯ 2102 ಸಕ್ರಿಯ ಪ್ರಕರಣಗಳಿದ್ದು, 952 ಜನ ಆಸ್ಪತ್ರೆಗಳು ಹಾಗೂ ಕರೊನಾ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1150 ಜನ ಮನೆಗಳಲ್ಲಿದ್ದಾರೆ.
ಭಾನುವಾರದ ವರದಿಯಂತೆ ಜಿಲ್ಲೆಯಲ್ಲಿ ಕಾರವಾರದಲ್ಲಿ 41, ಅಂಕೋಲಾದಲ್ಲಿ 4, ಕುಮಟಾದಲ್ಲಿ 15, ಹೊನ್ನಾವರದಲ್ಲಿ 4, ಭಟ್ಕಳದಲ್ಲಿ 10, ಶಿರಸಿಯಲ್ಲಿ 16, ಯಲ್ಲಾಪುರದಲ್ಲಿ 2, ಹಳಿಯಾಳದಲ್ಲಿ 6, ಜೊಯಿಡಾದಲ್ಲಿ 9 ಸೇರಿ 107 ಜನರಲ್ಲಿ ಹೊಸದಾಗಿ ಕರೊನಾ ಸೋಂಕು ಪತ್ತೆಯಾಗಿದೆ.
ಕಾರವಾರದಲ್ಲಿ 31, ಅಂಕೋಲಾದಲ್ಲಿ 9, ಕುಮಟಾದಲ್ಲಿ 52, ಹೊನ್ನಾವರದಲ್ಲಿ 28, ಭಟ್ಕಳ ಮತ್ತು ಶಿರಸಿಯಲ್ಲಿ ತಲಾ 1, ಮುಂಡಗೋಡಿನಲ್ಲಿ 5, ಹಳಿಯಾಳದಲ್ಲಿ 13 ಜನ ಸೇರಿ ಒಟ್ಟು 140 ಜನ ಸೋಂಕಿನಿಂದ ಗುಣವಾಗಿದ್ದಾರೆ. ಕಾರವಾರ ಹಾಗೂ ಕುಮಟಾದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ವ್ಯಾಪಾರಕ್ಕೆ ಬಂದವರು ವಾಪಸ್: ಹೊರ ಊರಿನಿಂದ ಬಂದು ಕೂರುವ ತರಕಾರಿ, ಹಣ್ಣಿನ ವ್ಯಾಪಾರಸ್ಥರಿಗೆ ಕಾರವಾರ ಮಾರುಕಟ್ಟೆಯಲ್ಲಿ ನಿರ್ಬಂಧ ಹೇರಲಾಗಿದೆ. ಭಾನುವಾರ ಗೋಕರ್ಣ ಹಾಗೂ ವಿವಿಧ ಊರುಗಳಿಂದ ಬಂದ 30 ಕ್ಕೂ ಹೆಚ್ಚು ವ್ಯಾಪಾರಸ್ಥರಿಗೆ ನಗರಸಭೆ ಅಧಿಕಾರಿಗಳು ಕೂರಲು ಅವಕಾಶ ನೀಡದೇ ವಾಪಸ್ ಕಳಿಸಿದರು. ಕರೊನಾ ಹಿನ್ನೆಲೆಯಲ್ಲಿ ಸಂತೆಗಳನ್ನು ಬಂದ್ ಮಾಡಲಾಗಿದೆ ಇದರಿಂದ ಹೊರ ಊರಿನ ವ್ಯಾಪಾರಸ್ಥರಿಗೆ ಅವಕಾಶವಿಲ್ಲ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.