

ಕಾರವಾರ: ಹೊನ್ನಾವರದಲ್ಲಿ ಇನ್ನೊಬ್ಬ ವ್ಯಕ್ತಿಗೆ (ಪಿ-2176) ಕರೊನಾ ಸೋಂಕು ಇರುವುದು ಸೋಮವಾರ ಖಚಿತವಾಗಿದೆ. ಮುಂಬೈನಿಂದ ಮೇ 20ರಂದು ಭಟ್ಕಳಕ್ಕೆ ಆಗಮಿಸಿದ 50 ವರ್ಷದ ವ್ಯಕ್ತಿ 23ರಂದು ಹೊನ್ನಾವರಕ್ಕೆ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ. ಸ್ವ್ಯಾಬ್ ತೆಗೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅವರ ಜತೆ ಮುಂಬೈನಿಂದ 11 ಜನ ಬಂದಿದ್ದು, ಎಲ್ಲರನ್ನೂ ನಿಗಾದ ಮೇಲೆ ಇಡಲಾಗಿದೆ. ಹೊನ್ನಾವರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8ಕ್ಕೆ ತಲುಪಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆಯಾಗಿದ್ದು, 36 ಸಕ್ರಿಯ ಪ್ರಕರಣಗಳಾಗಿವೆ.
ಯುವತಿ ಬಿಡುಗಡೆ: ಮೇ 5ರಂದು ಕರೊನಾ ಸೋಂಕು ಖಚಿತವಾದ ಭಟ್ಕಳದ 18 ವರ್ಷದ ಯುವತಿ (ಪಿ-659)ಯನ್ನು ಭಾನುವಾರ ಕಾರವಾರ ಕ್ರಿಮ್್ಸ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಕರೊನಾ ಗೆದ್ದವರ ಸಂಖ್ಯೆ 33ಕ್ಕೆ ತಲುಪಿದೆ. ಕ್ರಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೂ ಏಳು ಜನ ಗುಣಮುಖರಾಗಿದ್ದು, ಎರಡನೇ ಹಂತದ ಪ್ರಯೋಗಾಲಯ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ಒಂದೆರಡು ದಿನದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಹಂತ ಹಂತವಾಗಿ ಲಾಕ್ಡೌನ್ ಸಡಿಲ : ಕಂಟೇನ್ಮೆಂಟ್ ವಲಯ ಎಂದು ಸಂಪೂರ್ಣ ಸೀಲ್ಡೌನ್ ಆಗಿರುವ ಭಟ್ಕಳದಲ್ಲಿ ಮತ್ತೆ ಹೊಸ ಕರೊನಾ ಪ್ರಕರಣಗಳು ಬಾರದೇ ಇದ್ದಲ್ಲಿ ಹಂತ, ಹಂತವಾಗಿ ನಿಯಮಗಳನ್ನು ಸಡಿಲಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಭಟ್ಕಳದಲ್ಲಿ ಹೊಸ ಪ್ರಕರಣ ಕಾಣಿಸಿಲ್ಲ. ಸದ್ಯ ಕರೊನಾ ಸೋಂಕಿತರಾಗಿ ಆಸ್ಪತ್ರೆ ಸೇರಿದ ವ್ಯಕ್ತಿಗಳೆಲ್ಲರೂ ಮಾಸಾಂತ್ಯದ ಒಳಗೆ ಬಿಡುಗಡೆಯಾಗಲಿದ್ದಾರೆ. ಇದರಿಂದ ಹಂತ ಹಂತವಾಗಿ ಲಾಕ್ಡೌನ್ ಸಡಿಲ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ಯಾವ ತಾಲೂಕಿನಲ್ಲಿ ಎಷ್ಟು ಜನ ಕ್ವಾರಂಟೈನ್?: ಸದ್ಯ ಕಾರವಾರದಲ್ಲಿ 217 ಜನ ಸಾಂಸ್ಥಿಕ ಹಾಗೂ ಹೋಟೆಲ್ ಕ್ವಾರಂಟೈನ್ನಲ್ಲಿದ್ದಾರೆ. ಸೋಮವಾರ 116 ಜನರನ್ನು ಬಿಡುಗಡೆ ಮಾಡಲಾಗಿದೆ. 1,064 ಜನ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಮುಂಡಗೋಡಿನಲ್ಲಿ 41 ಜನ ಸಾಂಸ್ಥಿಕ ಹಾಗೂ 152 ಜನ ಹೋಂ ಕ್ವಾರಂಟೈನ್, ದಾಂಡೇಲಿಯಲ್ಲಿ 151 ಜನ ಸಾಂಸ್ಥಿಕ, 28 ಹೋಂ ಕ್ವಾರಂಟೈನ್, ಭಟ್ಕಳದಲ್ಲಿ 121 ಜನ ಸಾಂಸ್ಥಿಕ, 410 ಜನ ಹೋಂ ಕ್ವಾರಂಟೈನ್, ಕುಮಟಾದಲ್ಲಿ 136 ಜನ ಸಾಂಸ್ಥಿಕ, 1,723 ಜನ ಹೋಂ ಕ್ವಾರಂಟೈನ್, ಹಳಿಯಾಳದಲ್ಲಿ 503 ಜನ ಸಾಂಸ್ಥಿಕ, 590 ಜನ ಹೋಂ ಕ್ವಾರಂಟೈನ್ನಲ್ಲಿದ್ದಾರೆ. 87 ಜನರನ್ನು ಬಿಡುಗಡೆ ಮಾಡಲಾಗಿದೆ. ಶಿರಸಿಯಲ್ಲಿ 175 ಜನ ಸಾಂಸ್ಥಿಕ, 1,537 ಜನ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಅಂಕೋಲಾದಲ್ಲಿ 82, ಯಲ್ಲಾಪುರದಲ್ಲಿ 57 ಜನ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ.
ವರದಿ ಬರದೇ ಬಿಡುಗಡೆ ಆತಂಕ: ಸಾಂಸ್ಥಿಕ ಕ್ವಾರಂಟೈನ್ನಲ್ಲಿ 14 ದಿನ ಪೂರೈಸಿದ ವ್ಯಕ್ತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಹಳಿಯಾಳದಲ್ಲಿ ಕೆಲವರ ಗಂಟಲ ದ್ರವದ ಮಾದರಿಯ ವರದಿ ಬರದೇ ಬಿಡುಗಡೆ ಮಾಡಿರುವುದಕ್ಕೆ ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಸ್ಪಷ್ಟನೆ ನೀಡಿದ್ದು, ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರುವ ಎಲ್ಲರ ಗಂಟಲ ದ್ರವದ ಮಾದರಿ ಪರೀಕ್ಷೆ ಮಾಡಬೇಕು ಎಂಬ ನಿಯಮವಿಲ್ಲ. ಆದರೆ, ನಾವು ಜನರ ಸಮಾಧಾನಕ್ಕಾಗಿ ಎಲ್ಲರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸುತ್ತಿದ್ದೇವೆ. ಮಂಗಳೂರು ಪ್ರಯೋಗಾಲಯದಲ್ಲಿ ಒಮ್ಮೆಲೇ ಒತ್ತಡ ಹೆಚ್ಚಿದ್ದರಿಂದ ಕೆಲವರ ವರದಿಗಳು ಬರುವುದು ಒಂದೆರಡು ದಿನ ವಿಳಂಬವಾಗಿದೆ. ಜಿಲ್ಲೆಯಿಂದ ಕಳಿಸಿದ 1,675 ಜನರ ಪ್ರಯೋಗಾಲಯ ವರದಿ ಬರುವುದು ಬಾಕಿ ಇದೆ. ಸದ್ಯ ಕಾರವಾರದಲ್ಲಿ ದಿನಕ್ಕೆ 100 ಮಾದರಿಗಳ ಪರೀಕ್ಷೆ ಮಾಡಲಾಗುತ್ತಿದೆ. ಇನ್ನು ಮೂರ್ನಾಲ್ಕು ದಿನದಲ್ಲಿ ಆರ್ಟಿಪಿಸಿಆರ್ ಎಂಬ ಅತ್ಯಾಧುನಿಕ ಯಂತ್ರದ ಕಾರ್ಯನಿರ್ವಹಣೆ ಪ್ರಾರಂಭವಾಗಲಿದ್ದು, ನಂತರ ದಿನಕ್ಕೆ 400ಕ್ಕೂ ಅಧಿಕ ಮಾದರಿಗಳ ಪರೀಕ್ಷೆ ಇಲ್ಲಿಯೇ ಮಾಡಬಹುದು ಎಂದು ಅವರು ವಿವರಿಸಿದ್ದಾರೆ.