

ಸಿದ್ದಾಪುರ: ಸಿದ್ದಾಪುರ-ಕೋಲಸಿರ್ಸಿ-ಹಾರ್ಸಿಕಟ್ಟಾ-ಹೇರೂರು ರಸ್ತೆ ಹೊಂಡಗಳಿಂದ ತುಂಬಿಕೊಂಡು ರಸ್ತೆಯ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ನಿತ್ಯ ಸಂಕಟಪಡುವಂತಾಗಿದೆ.
ಕೋಲಸಿರ್ಸಿ, ಬಿದ್ರಕಾನ, ಕವಲಕೊಪ್ಪ ಹಾರ್ಸಿಕಟ್ಟಾ, ಮಾನಿಹೊಳೆ, ಗೊಳಿಮಕ್ಕಿ ಹತ್ತಿರ ರಸ್ತೆಯಲ್ಲಿ ಹೊಂಡಗಳು ಬಿದ್ದಿವೆ. ನಿತ್ಯ ಮಳೆ ಬೀಳುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾಗುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಬಿದ್ರಕಾನ ಸಮೀಪದ ರಸ್ತೆಯಲ್ಲಿ ಬಿದ್ದಿರುವ ಹೊಂಡ ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಅಲ್ಲ ಎಲ್ಲ ವಾಹನ ಸವಾರರಿಗೂ ಕಂಟಕಪ್ರಾಯವಾಗಿದೆ.
ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ತಾತ್ಕಾಲಿಕವಾಗಿ ರಸ್ತೆಯಲ್ಲಿನ ಹೊಂಡವನ್ನು ಮಳೆ ಕಡಿಮೆ ಆದ ತಕ್ಷಣ ಮುಚ್ಚಲಾಗುವುದು. ನಂತರ ಬೇಸಿಗೆಯಲ್ಲಿ ಪ್ರತಿ ವರ್ಷ ಎಲ್ಲೆಲ್ಲಿ ಹೆಚ್ಚು ರಸ್ತೆ ಹಾಳಾಗುತ್ತದೆಯೋ ಅಲ್ಲಿ ಡಾಂಬರೀಕರಣ ಮಾಡಲಾಗುವುದು. | ಅಭಿಲಾಶ್, ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಸಿದ್ದಾಪುರ