ಹೈನೋದ್ಯಮಕ್ಕೆ ಆಧಾರವಾದ ವಿಮೆ….!

bkt-3-2
ಬಾಗಲಕೋಟೆ ತಾಲೂಕಿನ ಗ್ರಾಮಗಳಲ್ಲಿ ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಸೇವೆ ಇಲಾಖೆ ಅಽಕಾರಿಗಳು ವಿಮೆ ಕುರಿತು ರೈತರಿಗೆ ತಿಳುವಳಿಕೆ ನೀಡಿದರು.
Published on

ಸಂತೋಷ ದೇಶಪಾಂಡೆ ಬಾಗಲಕೋಟೆ: ಸರ್ಕಾರ ಜಾನುವಾರುಗಳಿಗಾಗಿ ವಿಮೆ ಯೋಜನೆ ತಂದರೂ ಅದರ ಕವರೇಜ್ ಕಡಿಮೆ ಎನ್ನುವ ಕಾರಣಕ್ಕೆ ಹೆಚ್ಚಿನ ರೈತರು ತಮ್ಮ ಜಾನುವಾರುಗಳಿಗೆ ವಿಮೆ ಮಾಡಿಸಲು ಮುಂದಾಗುತ್ತಿರಲಿಲ್ಲ. ಆದರೆ, ಕೇಂದ್ರ ಸರ್ಕಾರದ ನೂತನ ವಿಮೆ ಜಾರಿಗೆ ಬಂದ ನಂತರ ಜಿಲ್ಲೆಯ ರೈತರು ತಮ್ಮ ಜಾನುವಾರುಗಳಿಗೆ ವಿಮೆ ಮಾಡಿಸಲು ಆಸಕ್ತಿ ವಹಿಸಿದ್ದಾರೆ. ವಿಮೆ ಯೋಜನೆ ಹೈನೋದ್ಯಮಕ್ಕೆ ಭಾರಿ ಆಧಾರವಾಗಿದೆ…!

ಇದು ರೈತರಿಗೆ ವರದಾನವಾಗಿದ್ದು, ಆತಂಕ, ಭಯದಲ್ಲಿ ಇದ್ದ ಅನ್ನದಾತರರಿಗೆ ಧೈರ್ಯ ಬಂದಂತಾಗಿದೆ. ಪಶು ಇಲಾಖೆ ರೈತರಿಗೆ ಇನ್ನು ಹೆಚ್ಚಿನ ಜಾಗೃತಿ ಮೂಡಿಸಿದಲ್ಲಿ ಬಹಳಷ್ಟು ರೈತರಿಗೆ ಅನುಕೂಲವಾಗಲಿದೆ. ಪ್ರೀಮಿಯಂ ಮೊತ್ತ ಬಹಳ ವಿದ್ದಕಾರಣ ಅನೇಕ ರೈತರು ವಿಮೆಯಿಂದ ದೂರ ಉಳಿದಿದ್ದರು. ವಿಮೆ ಮೊತ್ತ ಕಡಿಮೆಯಾಗಿದ್ದರಿಂದ ರೈತರು ಖುಷಿಯಾಗಿದ್ದಾರೆ.

ಹೊಸ ನೀತಿಗೆ ಖುಷ…
ಜಾನುವಾರುಗಳಿಗೆ ಯಾವುದಾದರೂ ಕಾಯಿಲೆಯಿಂದ ಸಾವನ್ನಪ್ಪಿದಾಗ ವಿಮೆ ಮಾಡಿಸಿದ ಜಾನುವಾರು ಆಗಿದ್ದರೆ ಅದಕ್ಕೆ ಮಾಡಿಸಿದ ವಿಮೆ ಮೊತ್ತ ಪರಿಹಾರ ರೂಪದಲ್ಲಿ ಬರುತ್ತದೆ. ಕೇಂದ್ರ ಸರ್ಕಾರದ ಎನ್‌ಎಲ್‌ಎಂಗೆ (ರಾಷ್ಟ್ರೀಯ ಜಾನುವಾರು ಮಿಷನ್) ಮೂಲಕ ಬಂದಿರುವ ಹೊಸ ನೀತಿ ಅನುಸಾರ ವಿಮೆ ಮಾಡಿಸಬಹುದಾಗಿದೆ. ಕೆಎಂಎಫ್‌ನಲ್ಲೂ ಹಾಲು ಕೊಡುವ ಪಶುಗಳಿಗೆ ವಿಮೆ ಮಾಡಲಾಗುತ್ತದೆ. ಆದರೆ, ಜಾನುವಾರು ಮೃತ ಪಟ್ಟರೆ ಪರಿಹಾರಕ್ಕೆ ವರ್ಷಗಟ್ಟಲೇ ಕಾಯಲೇಬೇಕು ಎಂದು ಹೆಚ್ಚಿನ ರೈತರು ವಿಮೆ ಮಾಡಿಸಲು ಮುಂದಾಗುತ್ತಿರಲಿಲ್ಲ. ಆದರೆ, ಕೇಂದ್ರದ ಎನ್‌ಎಲ್‌ಎಂ ಅಡಿ ಅತೀ ಕಡಿಮೆ ದರದಲ್ಲಿ ಆಕಳು ಹಾಗೂ ಎಮ್ಮೆಗೆ ೭೦ ಸಾವಿರ ರು. ವರೆಗೂ ವಿಮೆ ಮಾಡಿಸಬಹುದಾಗಿದೆ.

ರಾಷ್ಟ್ರೀಯ ಜಾನುವಾರು ಮಿಷನ್ ಅಡಿಯಲ್ಲಿ ಇಫ್ಕೋ ಟೊಕಿಯೋ ಎಂಬ ಕಂಪನಿ ರಾಜ್ಯದ ಜಾನುವಾರುಗಳಿಗೆ ಸರ್ಕಾರದಿಂದ ವಿಮೆ ಮಾಡಿಸುತ್ತಿದೆ. ಇದರಡಿ ಜಾನುವಾರುಗಳಿಗೆ ವಿಮೆ ಮಾಡಿಸಲು ಜಿಲ್ಲೆಗೆ ಮೊದಲ ಕಂತಿನಲ್ಲಿ ಒಟ್ಟು ೩.೮೭ ಲಕ್ಷ ರು. ಬಂದಿತ್ತು. ಅದು ಕೂಡ ಕೇವಲ ಎಸ್ಸಿ ಹಾಗೂ ಎಸ್ಟಿ ಅವರಿಗೆ. ವಿಮೆ ಪ್ರೀಮಿಯಂನ ಶೇ.೧೫ ರಷ್ಟಿನಲ್ಲಿ ಎಸ್ಸಿ ಹಾಗೂ ಎಸ್ಟಿ ಅವರು ಜಾನುವಾರುಗಳಿಗೆ ವಿಮೆ ಮಾಡಿಸಬಹುದಾಗಿತ್ತು. ಉಳಿದವರಿಗೆ ಶೇ. ೩೦ ರಷ್ಟು ಪ್ರೀಮಿಯಂ ಮೊತ್ತ ತುಂಬಬೇಕಿತ್ತು. ಆದರೆ, ಎರಡನೇ ಕಂತಿನಲ್ಲಿ ಜಿಲ್ಲೆಗೆ ಬಂದ ೧೭.೧೩ ಲಕ್ಷ ರು.ದಲ್ಲಿ ಯಾವುದೇ ರೈತರು ಕೇವಲ ಶೇ.೧೫ ಪ್ರೀಮಿಯಂ ಮೊತ್ತದಲ್ಲಿ ವಿಮೆ ಮಾಡಿಸಿಕೊಳ್ಳಬಹುದಾಗಿದ್ದರಿಂದ ಜಿಲ್ಲೆಗೆ ನೀಡಿದ್ದ ಗುರಿ ತಲುಪಿ ಬೇರೆ ಜಿಲ್ಲೆಯಲ್ಲಿ ಉಳಿದ ಸರ್ಕಾರದ ಅನುದಾನವನ್ನು ಜಿಲ್ಲೆಗೆ ವರ್ಗಾಯಿಸಿಕೊಳ್ಳಲಾಗಿದೆ ಎಂದು ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಸೇವೆ ಇಲಾಖೆಯ ಉಪನಿರ್ದೇಶಕ ಡಾ.ಶಿವಾನಂದ ಕರಡಿಗುಡ್ಡ ತಿಳಿಸಿದರು.

ಪ್ರೀಮಿಯಂ ಮೊತ್ತದಲ್ಲಿ ಶೇ.೧೫ ಮಾತ್ರ ರೈತರು ಕಟ್ಟಬೇಕು. ಉಳಿದ ಹಣವನ್ನು ಸರ್ಕಾರವೇ ಭರಿಸುತ್ತದೆ ಎಂಬ ಕಾರಣಕ್ಕೆ ಜಿಲ್ಲೆಗೆ ನೀಡಿದ್ದ ಗುರಿ ತಲುಪಿದ ನಂತರ ನಮ್ಮಲ್ಲಿ ಹೆಚ್ಚಿನ ರೈತರು ಇನ್ನೂ ವಿಮೆ ಮಾಡಿಸಲು ಆಸಕ್ತಿ ತೋರಿದ ಕಾರಣ ಬೇರೆ ಜಿಲ್ಲೆಗಳಿಗೆ ಸರ್ಕಾರ ನೀಡಿದ್ದ ೧೪ ಲಕ್ಷ ರು. ಅನುದಾನವನ್ನು ಜಿಲ್ಲೆಗೆ ಪಡೆಯಲಾಗಿದೆ. ಈ ವಿಮೆಯಡಿ ಎಮ್ಮೆ ಹಾಗೂ ಆಕಳಿಗೆ ಅದರ ಗಾತ್ರ ಹಾಗೂ ಆಕರಕ್ಕೆ ತಕ್ಕಂತೆ ೧೦ ಸಾವಿರ ರೂ.ಯಿಂದ ೭೦ ಸಾವಿರ ರೂ.ವರೆಗೂ ವಿಮೆ ಮಾಡಿಕೊಡಲಾಗುತ್ತಿದೆ. ಜತೆಗೆ ಒಂದು ವರ್ಷದಿಂದ ಮೂರು ವರ್ಷದ ವರೆಗೆ ಒಂದು ಜಾನುವಾರಕ್ಕೆ ವಿಮೆ ಮಾಡಿಕೊಡಲು ಅವಕಾಶವಿದ್ದು, ಜಿಲ್ಲೆಯ ಹೆಚ್ಚಿನ ಹೈನೋದ್ಯಮ ನಡೆಸುತ್ತಿರುವ ರೈತರು ತಮ್ಮ ಜಾನುವಾರುಗಳಿಗೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net