

ರಾಜೇಂದ್ರ ಶಿಂಗನಮನೆ ಶಿರಸಿ
ಸರ್ಕಾರವು ಪ್ರತಿ ಲೀಟರ್ ಹಾಲಿಗೆ ನೀಡುವ 5 ರೂಪಾಯಿ ಪ್ರೋತ್ಸಾಹಧನ ಹೈನುಗಾರರ ಪಾಲಿಗೆ ಗಗನ ಕುಸುಮವಾಗಿದೆ. ಪ್ರೋತ್ಸಾಹಧನ ಸಿಗದೆ 6 ತಿಂಗಳು ಕಳೆದಿದೆ. ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಅಂದಾಜು 4 ಕೋಟಿ ರೂಪಾಯಿ ಬಾಕಿ ಇದೆ.
ಜಿಲ್ಲೆಯಲ್ಲಿ ಸುಮಾರು 7800 ಹೈನುಗಾರರು 247 ಸಂಘಗಳಲ್ಲಿ ನಿತ್ಯವೂ ವ್ಯವಹರಿಸುತ್ತಿದ್ದಾರೆ. 43 ಸಾವಿರ ಲೀಟರ್ ಹಾಲನ್ನು ಹಾಲು ಸಂಘಗಳಿಗೆ ಹೈನುಗಾರರು ನೀಡುತ್ತಿದ್ದಾರೆ. ಪ್ರತಿ ದಿನ ಕೋಟ್ಯಂತರ ರೂಪಾಯಿ ವಹಿವಾಟು ಆಗುತ್ತಿದೆ. ಆದರೂ ಹೈನುಗಾರರಿಗೆ ಉತ್ತೇಜನಕ್ಕೆ ಸರ್ಕಾರದಿಂದ ಪ್ರತೀ ಲೀಟರ್ ಹಾಲಿಗೆ ನೀಡಬೇಕಿರುವ 5 ರೂ. ಪ್ರೋತ್ಸಾಹಧನ ಮಾತ್ರ ಬಿಡುಗಡೆಯಾಗಿಲ್ಲ. ತಿಂಗಳಿಗೆ ಅಂದಾಜು 65 ಲಕ್ಷ ರೂ.ಗಳಂತೆ ಈವರೆಗೆ 4 ಕೋಟಿ ರೂ.ಗಳಷ್ಟು ಮೊತ್ತ ಬಾಕಿಯಿದೆ.
ಐಡಿ ಇದ್ದರೆ ಮಾತ್ರ ಹಣ: ಸರ್ಕಾರದಲ್ಲಿ ಲೆಕ್ಕಪತ್ರ, ದಾಖಲಾತಿಗಳ ಸಮರ್ಪಕತೆಗಾಗಿ ಫಾರ್ಮರ್ ರಿಜಿಸ್ಟ್ರೇಶನ್ ಆಂಡ್ ಯುನಿಫೈಡ್ ಬೆನಿಫೀಶಿಯರಿ ಇನ್ಪಾರ್ವೆುೕೕಶನ್ ಸಿಸ್ಟ್ಂ (ಫ್ರೂಟ್ಸ್) ಐಡಿ ರಚಿಸುವಂತೆ ನಾಲ್ಕೈದು ತಿಂಗಳ ಹಿಂದೆ ಪ್ರತಿ ಹಾಲು ಸಂಘಗಳಿಗೂ ತಿಳಿಸಲಾಗಿತ್ತು. ತಂತ್ರಾಂಶ ಸಮಸ್ಯೆಯ ಜತೆ ನೆಟ್ವರ್ಕ್ ಸಮಸ್ಯೆಯ ಕಾರಣಕ್ಕೆ ಈ ದಾಖಲಾತಿ ನೀಡುವಲ್ಲಿ ವಿಳಂಬವಾಗಿದೆ. ಇದನ್ನೇ ಮುಂದಿಟ್ಟುಕೊಂಡಿರುವ ಅಧಿಕಾರಿಗಳು ಐಡಿ ಇದ್ದವರಿಗೆ ಮಾತ್ರ ಪ್ರೋತ್ಸಾಹಧನ ನೀಡಲಾಗುವುದು ಎಂಬ ಹೊಸ ವರಸೆ ಶುರು ಮಾಡಿದ್ದಾರೆ. ಇದು ಹೈನುಗಾರರಿಗೆ ನುಂಗಲಾರದ ತುತ್ತಾಗಿದೆ ಎಂಬುದು ಹೆಸರು ಹೇಳಲಿಚ್ಛಿಸದ ಹಾಲು ಸಂಘದ ಮುಖ್ಯಸ್ಥರೊಬ್ಬರ ಮಾತು.
ಕರೊನಾ ನೆಪ, ದುಡ್ಡಿಲ್ಲ: ಪ್ರೋತ್ಸಾಹಧನ ಬಾಕಿಯ ಸಂಬಂಧ ಒಕ್ಕೂಟದ ಅಧಿಕಾರಿಗಳನ್ನು ಸಂರ್ಪಸಿದರೆ ಕರೊನಾ ಕಾರಣದಿಂದ ಸರ್ಕಾರದಲ್ಲಿ ಹಣವಿಲ್ಲ. ಹಾಗಾಗಿ ಬಿಡುಗಡೆ ಮಾಡಲಾಗಿಲ್ಲ. ಆದರೆ ಹಂತಹಂತವಾಗಿ ಹೈನುಗಾರರಿಗೆ ಮೊತ್ತ ಸಂದಾಯ ಮಾಡುವುದಾಗಿ ಸಮಜಾಯಿಷಿ ನೀಡುತ್ತಾರೆ.
ಯಾವುದೇ ಸರ್ಕಾರವಿದ್ದರೂ ಹೈನುಗಾರರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಾಲ ಮಾಡಿ ಆಕಳು ಖರೀದಿಸಿ ಹೈನೋದ್ಯಮ ಮಾಡುತ್ತಿದ್ದೇನೆ. ಸರ್ಕಾರದ ಪ್ರೋತ್ಸಾಹಧನ ಲಭಿಸಿದರೆ ಅನುಕೂಲ ಆಗುತ್ತಿತ್ತು. ಆದರೆ, 6 ತಿಂಗಳಿನಿಂದ ಪ್ರೋತ್ಸಾಹಧನ ನೀಡುವ ವಿಷಯವನ್ನು ಸರ್ಕಾರ ಮರೆತಂತಿದೆ. ಇತ್ತೀಚೆಗೆ 2020ರ ಅಗಸ್ಟ್ ತಿಂಗಳ ಹಣವನ್ನು ಮಾತ್ರ ಬಿಡುಗಡೆ ಮಾಡಿದೆ. ಇದು ಹೈನುಗಾರರಿಗೆ ಸರ್ಕಾರ ಮಾಡುತ್ತಿರುವ ಅನ್ಯಾಯ. |ನೇತ್ರಾವತಿ ಹೆಗಡೆ ಹೆಗ್ಗುಂಬ್ಳೆ ಹೈನುಗಾರ ಮಹಿಳೆ
ಹೈನುಗಾರಿಕೆ ಇಂದು ತುಂಬಾ ದುಬಾರಿಯಾಗುತ್ತಿದೆ. ಸರ್ಕಾರದ ಪ್ರೋತ್ಸಾಹಧನ ಪಡೆಯುವುದು ಹೈನುಗಾರರಿಗೆ ಅನಿವಾರ್ಯವಾಗಿದೆ. ಈ ಮೊದಲು ಫ್ರೂಟ್ಸ್ ಐಡಿ ಇಲ್ಲದಿದ್ದರೂ ಹೈನುಗಾರರ ಖಾತೆಗೆ ನೇರವಾಗಿ ಪ್ರೋತ್ಸಾಹಧನ ಜಮಾ ಆಗುತ್ತಿತ್ತು. ಆದರೆ ಈಗ ಐಡಿ ಕಡ್ಡಾಯ ಮಾಡಲಾಗಿದೆ. ಇದರಿಂದಲೂ ವಿಳಂಬವಾಗಿದೆ. ಪ್ರತಿ 2 ತಿಂಗಳಿಗೊಮ್ಮೆಯಾದರೂ ಕಡ್ಡಾಯವಾಗಿ ಸರ್ಕಾರವು ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. | ಸುರೇಶ್ಚಂದ್ರ ಹೆಗಡೆ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ