

ಬಾಗಲಕೋಟೆ: ಚರಿತ್ರೆಯ ನಾಯಕಿಯಾಗಿ ಬೆಳಗಿರುವ ಹೇಮರಡ್ಡಿ ಮಲ್ಲಮ್ಮಳ ಬದುಕು ಮಹಿಳೆಯರಿಗೆ ಆದರ್ಶವಾಗಿದೆ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.
ವಿದ್ಯಾಗಿರಿಯ ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆ ಭಾನುವಾರ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮಳ ೬೦೨ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಲ್ಲಮ್ಮಳ ತಾಳ್ಮೆ, ಸಹನೆ, ಅಂತಕರಣದ ಗುಣಗಳು ಅವಳನ್ನು ದೇವತೆಯ ಸ್ವರೂಪಕ್ಕೆ ತಂದವು ಎಂದರು.
ಮಾಜಿ ಸಚಿವ ಎಸ್.ಆರ್.ಪಾಟೀಲ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಮಹಿಳಾ ಲೋಕದ ಅನರ್ಘ್ಯ ರತ್ನ. ಅವಳ ಸಾತ್ವಿಕ ವಿಚಾರ, ಪಡೆದ ಸಂಸ್ಕಾರ ಹಾಗೂ ಸಮಾಧಾನದ ಬದುಕು ಎಲ್ಲವೂ ಆದರ್ಶಪ್ರಾಯವಾಗಿವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಮಲ್ಲಮ್ಮಳ ಜಯಂತಿ ಆಚರಿಸಿ ಅವಳ ಆದರ್ಶ ಜೀವನದ ಬಗ್ಗೆ ತಿಳಿದರೆ ಸಾಲದು. ಅವಳ ಆದರ್ಶದ ಗುಣಗಳನ್ನು ಅಳವಡಿಸಿಕೊಂಡು ನೆಮ್ಮದಿಯ ಬದುಕು ಕಂಡುಕೊಳ್ಳಬೇಕು ಎಂದರು.
ಬೀಳಗಿ ಶಾಸಕ ಜೆ.ಟಿ.ಪಾಟೀಲ 'ಸಂಪೂರ್ಣ ಹೇಮರಡ್ಡಿ ಮಲ್ಲಮ್ಮ' ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ರಡ್ಡಿ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು.
ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯ ಅಧ್ಯಕ್ಷ ಮಹೇಶ ಕಕರಡ್ಡಿ ವಹಿಸಿದ್ದರು. ಉಪಾಧ್ಯಕ್ಷೆ ಶೋಭಾ ಕಟಗೇರಿ ವೇದಿಕೆಯಲ್ಲಿದ್ದರು. ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ತಂಡದವರು ವೇಮನ ವಚನ ಪ್ರಸ್ತುತಪಡಿಸಿದರು. ಸಂಜಯ ನಡುವಿನಮನಿ, ಪಾಂಡು ಸನ್ನಪ್ಪನವರ ನಿರೂಪಿಸಿದರು.