ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

24Bnk03
Published on

ಬಂಕಾಪುರ: ಸಮರ್ಪಕ ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ಹುನಗುಂದ, ಶಿಡ್ಲಾಪುರ, ಹುಲಿಕಟ್ಟಿ ಗ್ರಾಮಗಳ ರೈತರು, ಬಂಕಾಪುರ ಹೆಸ್ಕಾಂ ಕಚೇರಿಗೆ ಬೀಗ ಜಡಿದು, ತಮಟೆ ಬಾರಿಸುತ್ತ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಒಣಗಿದ ಬೆಳೆ ಪ್ರದರ್ಶಿಸಿದ ರೈತರು, ಈ ವರ್ಷ ಅತಿವೃಷ್ಟಿಗೆ ಮುಂಗಾರು ಬೆಳೆ ಹಾನಿಯಾಗಿವೆ. ಹಿಂಗಾರು ನೀರಾವರಿ ಬೆಳೆಗೆ ನೀರಿದ್ದರೂ ವಿದ್ಯುತ್ ಇಲ್ಲದೆ ಒಣಗುತ್ತಿವೆ. ದಿನಕ್ಕೆ ಏಳು ಗಂಟೆ ವಿದ್ಯುತ್ ಪೂರೈಸುವುದಾಗಿ ಹೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಒಂದು ಗಂಟೆಯೂ ಸರಿಯಾಗಿ ಪೂರೈಕೆಯಾಗಲ್ಲ. ವಿದ್ಯುತ್ ಏರುಪೇರಿನಿಂದ ಕೊಳವೆ ಬಾವಿಗಳ ಉಪಕರಣಗಳು ಸುಟ್ಟು ಹೋಗುತ್ತಿವೆ ಎಂದು ಅಕ್ರೋಶ ವ್ಯಕ್ತಪಡಿಸಿದ ರೈತರು, ಉಚಿತ ಬೇಡ, ಖಚಿತ ವಿದ್ಯುತ್ ಕೊಡಿ ಎಂದು ಒತ್ತಾಯಿಸಿದರು.

ಕಳೆದ ಒಂದು ತಿಂಗಳದಿಂದ ಮನವಿ ಮಾಡಿಕೊಂಡರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕನಿಷ್ಠ ಒಂದು ತಿಂಗಳು ಕಾಲ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿದರೆ ಬೆಳೆ ಬರುತ್ತವೆ. ರಾತ್ರಿಯಾದರೂ ಸಮರ್ಪಕ ವಿದ್ಯುತ್ ಕೊಡಿ ಎಂದು ಆಗ್ರಹಿಸಿದರು.

ಹೆಸ್ಕಾಂ ಸೆಕ್ಷನ್ ಆಫೀಸರ್ ನಾಗರಾಜ ಪ್ರತಿಕ್ರಿಯಿಸಿ, ಈ ಕುರಿತು ಮೇಲಧಿಕಾರಿಗಳ ಗಮನ ಸೆಳೆದು, ಎರಡ್ಮೂರು ದಿನದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ರೈತರಾದ ಮುತ್ತಪ್ಪ ಕಲಕಟ್ಟಿ, ಬಸಪ್ಪ ದೊಡ್ಡಮನಿ, ರುದ್ರಪ್ಪ ಕೆಂಗಣ್ಣವರ, ರಮೇಶ ಸುಂಕದ, ಗೋವಿಂದಪ್ಪ ಕೆಂಗಣ್ಣವರ, ಸಹದೇವಪ್ಪ ಕಲಕಟ್ಟಿ, ಪುಟ್ಟಪ್ಪ ಸಣ್ಣಮನಿ, ಶಿವಪ್ಪ ಶ್ಯಾಗೋಟಿ, ಪುತ್ರಪ್ಪ ದಮಡಪ್ಪನವರ, ಜಗದೀಶ ಎಲ್.ಬಿ., ಭೀಮಪ್ಪ ಮುಳಕೇರಿ, ಮಂಜು ತಳವಾರ, ಫಕ್ಕೀರಪ್ಪ ದೊಡಮನಿ, ಬಸಪ್ಪ ಬಡಪ್ಪನವರ, ಬಿ.ಎಲ್.ದೊಡ್ಡಮನಿ, ಮಂಜು ಬಡಪ್ಪನವರ, ಎನ್.ಎಸ್. ಸಣ್ಣಮನಿ, ಸಿದ್ದಪ್ಪ ಕೆಂಗಣ್ಣವರ, ಹನುಮಂತಪ್ಪ ವಾಲ್ಮೀಕಿ, ದೇವರಾಜ ನೇಕಾರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net