

ಹೊಳೆನರಸೀಪುರ: ತಾಲೂಕಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲಾ-ಕಾಲೇಜುಗಳನ್ನು ತೆರೆಯಲಾಗಿದೆ. ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಲು ಇಂತಹ ಕಾಲೇಜುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗ ಸಹಯೋಗದೊಂದಿಗೆ ಬುಧವಾರ ಕಾಲೇಜಿನಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೇಂಜರ್ಸ್ ಮತ್ತು ಯುವ ರೆಡ್‌ಕ್ರಾಸ್ ಘಟಕಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಹೆಣ್ಣು ಮಕ್ಕಳು ಗುಣಮಟ್ಟದ ವಿದ್ಯಾಭ್ಯಾಸ ಪಡೆದುಕೊಳ್ಳಲಿ ಎಂದು ಸರ್ಕಾರದ ವತಿಯಿಂದ ಎಲ್ಲ ಮೂಲಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದೇನೆ. ರಾಜ್ಯ ಮತ್ತು ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳಿಗೆ ಹೋಲಿಸಿದರೆ ಇಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂದರು.
ಸಾಹಿತಿ ನಾಗೇಶ್ ಕೌಂಡಿನ್ಯ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವುದು ಮುಖ್ಯ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದರು.
ಉಪನ್ಯಾಸಕಿ ಎಂ.ಕುಸುಮಾ ಅವರು ರಚಿಸಿರುವ ಸಂವಾದಿ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಪ್ರಾಂಶುಪಾಲ ಪ್ರೊ.ಕೆ.ಗುರುರಾಜ್ ಮಾತನಾಡಿದರು. ಉಪನ್ಯಾಸಕ ತಿಪ್ಪೇಸ್ವಾಮಿ, ಪುರಸಭೆ ಅಧ್ಯಕ್ಷ ಎಚ್.ಕೆ.ಪ್ರಸನ್ನ, ಎಚ್.ಕೆ.ಲಕ್ಷ್ಮಣ್, ನಿವೃತ್ತ ಪ್ರಾಂಶುಪಾಲ ಎಚ್.ಎಸ್.ಪುಟ್ಟ ಸೋಮಪ್ಪ, ಪುರಸಭೆ ಮಾಜಿ ಅಧ್ಯಕ್ಷ ಕೆ.ಶ್ರೀಧರ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜೈಪ್ರಕಾಶ್, ಪುರಸಭೆ ಮಾಜಿ ಸದಸ್ಯ ಸುದರ್ಶನ್, ಗೋಕುಲ್, ಉಪನ್ಯಾಸಕರಾದ ಡಾ.ಎಚ್.ಎನ್.ಮಂಜುರಾಜು, ಖಲೀಲ್ ಅಹ್ಮದ್, ಕೆ.ಎಸ್.ಚಂದ್ರಕಲಾ, ವಿದ್ಯಾ, ಡಾ.ಯಲ್ಲಪ್ಪ, ವಿ.ನಾಗೇಶ್ ನಾಯಕ್, ಅತಿಥಿ ಉಪನ್ಯಾಸಕರಾದ ಅನಂತ್ ಕುಮಾರ್, ಬಿ.ಟಿ.ಲೋಕೇಶ್, ಸುರೇಶ್, ಚೇತನ್, ಸುಪ್ರೀತ್ ಪಾಶ್ವನ್, ಪತ್ರಕರ್ತ ಎಚ್.ಬಿ.ವೆಂಕಟೇಶ್ ಇದ್ದರು.